ಮಂಜೇಶ್ವರ/ಕುಂಬಳೆ/ಬದಿಯಡ್ಕ: ನಾಡಿನಾದ್ಯಂತ ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಶಿವರಾತ್ರಿ ಮಹೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಶಿವರಾತ್ರಿ ಮಹೋತ್ಸವದ ಅಂಗವಾಗಿ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಭಜನೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ದೇವಸ್ಥಾನಗಳಲ್ಲಿ ಬೆಳಗ್ಗಿನಿಂದಲೇ ಭಕ್ತಾದಿಗಳು ನೆರೆದಿದ್ದು, ವಿಶೇಷ ಪೂಜೆ ಸಲ್ಲಿಸಿದರು. ಅಭಿಷೇಕ, ಶಿವಸ್ತುತಿ ಮೊದಲಾದವುಗಳನ್ನು ನಡೆಸಿದರು.
ಭಕ್ತರು ಉಪವಾಸವಿದ್ದು, ಶಿವನ ಧ್ಯಾನದಲ್ಲಿ ತೊಡಗಿದ್ದರು. ದೇವಸ್ಥಾನ, ಮಂದಿರಗಳಿಗೆ ಭೇಟಿ ನೀಡಿದ ಭಕ್ತಾದಿಗಳು ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥತೆಯನ್ನು ಅನುಭವಿಸಿದರು.
ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಚಿಗುರುಪಾದೆ ಮಹಾಲಿಂಗೇಶ್ವರ ದೇವಸ್ಥಾನ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ, ಪುತ್ತಿಗೆ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವರ್ಕಾಡಿಯ ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನ, ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶಿರಿಯ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನ, ಕಿದೂರು ಶ್ರೀ ಮಹಾದೇವ ದೇವಸ್ಥಾನ, ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನ ಮೊದಲಾದೆಡೆಗಳಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದ ಶಿವರಾತ್ರಿ ಮಹೋತ್ಸವ ಜರಗಿತು.
ಶಿವನು ಸ್ವಯಂಭೂಲಿಂಗ ರೂಪದಲ್ಲಿ ಉದ್ಭವಿಸಿದ ದಿನವಿದು. ಹಾಲಾಹಲ ವಿಷಪಾನ ಮಾಡಿದ ಸಂದರ್ಭ ಶಿವ ತಾಂಡವವಾಡಿದ ಸುದಿನವೂ ಹೌದು. ಈ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಶಿವರಾತ್ರಿ ಮಹೋತ್ಸವವನ್ನು ಜನರು ಭಕ್ತಿ ಸಡಗರದಿಂದ ಆಚರಿಸಿಕೊಂಡು ಬರುತ್ತಿರುವುದು ರೂಢಿಯಾಗಿದೆ. ಮಹಾಶಿವರಾತ್ರಿ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ. ಶಿವರಾತ್ರಿಯಂದು ಶಿವನನ್ನು ಪೂಜಿಸುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿಯಾಗುವುದಾಗಿ ಪ್ರತೀತಿಯಿದೆ.