ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಪ್ರೇಮಿಗಳ ದಿನದಂದು (ಫೆ.14) ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಫೆಬ್ರವರಿ 8ರಂದು ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, 70 ಸ್ಥಾನಗಳ ಪೈಕಿ ಆಮ್ ಆದ್ಮಿ ಪಕ್ಷ 62 ಸ್ಥಾನ ಗೆದ್ದರೆ ಬಿಜೆಪಿ 8 ಸ್ಥಾನ ಗೆದ್ದಿದೆ. ಇನ್ನು ಕಾಂಗ್ರೆಸ್ ಮತ್ತೆ ಶೂನ್ಯ ಸಾಧನೆ ಮಾಡಿದೆ.ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ದೀನದಯಾಳ್ ಉಪಾಧ್ಯಾಯ್ ಮಾರ್ಗ್ ನಲ್ಲಿರುವ ಆಪ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಗಳಲ್ಲಿ ಮೌನ ಮನೆಮಾಡಿದೆ. ಬಿಜೆಪಿ ಕಚೇರಿಯತ್ತ ಯಾವುದೇ ಹಿರಿಯ ನಾಯಕರು ತಲೆ ಹಾಕಿಲ್ಲ.ಎಎಪಿ ಕಚೇರಿ ಎದುರು ಸೇರಿದ ಬೆಂಬಲಿಗರು ಬಿಳಿ ಟೀಷರ್ಟ್ ಧರಿಸಿ, 'ಲಗೇ ರಹೋ ಕೇಜ್ರೀವಾಲ್' ಎಂದು ಘೋಷಣೆ ಕೂಗಿದರು. ಈ ಗುಂಪಿನಲ್ಲಿ ಕೇಜ್ರೀವಾಲ್ ಅವರಂತೆಯೇ ಉಡುಪು ಧರಿಸಿದ್ದ ಮಗುವೊಂದು ಗಮನ ಸೆಳೆಯಿತು.
ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ರಾಷ್ಟ್ರ ರಾಜಧಾನಿಯ ಜನರು ಅಭಿವೃದ್ಧಿಯ ರಾಜಕೀಯ ಎಂಬ ಹೊಸ ಬಗೆಯ ರಾಜಕೀಯಕ್ಕೆ ಜನ್ಮ ನೀಡಿದ್ದಾರೆ. ಜನರಿಗೆ ಕಡಿಮೆ ದರದ ವಿದ್ಯುತ್, ಮೊಹಲ್ಲಾ ಕ್ಲಿನಿಕ್ ಗಳು ಮತ್ತು ರಸ್ತೆಗಳನ್ನು ನೀಡುವರಿಗೆ ಮಾತ್ರ ಅಧಿಕಾರ ನೀಡುವುದಾಗಿ ಸಂದೇಶ ನೀಡಿದ್ದಾರೆ ಎಂದರು.
ಇದು ಭಾರತ ಮಾತೆಯ ಗೆಲುವು. ನನ್ನನ್ನು ಸತತ ಮೂರನೇ ಬಾರಿಗೆ ಗೆಲ್ಲಿಸಿದ ದೆಹಲಿಯ ಜನತೆಗೆ ನನ್ನ ಧನ್ಯವಾದಗಳು ಎಂದರು. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬರುತ್ತಿದ್ದು, ಈ ಹಿಂದೆ ಬಹುಮತಕ್ಕೆ ಅಗತ್ಯ ಬೆಂಬಲ ಇಲ್ಲದಿದ್ದಾಗ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲಾಗಿತ್ತು. ಆದರೆ ಕೇವಲ 49 ದಿನಗಳಲ್ಲೇ ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆಪ್ ಸರ್ಕಾರ ಪತನವಾಗಿತ್ತು.
ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 67 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಇದೀಗ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದೆ.