ಕುಂಬಳೆ: ಶ್ರೀರಾಮಚಂದ್ರಾಪುರ ಮಠವು ಸದಾ ಶಿಷ್ಯ ಭಕ್ತರ ಯೋಗಕ್ಷೇಮವನ್ನೇ ಬಯಸುತ್ತಿದೆ. ಮಠಕ್ಕೆ ಶೂನ್ಯ ಹೃದಯದಿಂದ ಬಂದ ಶಿಷ್ಯ ಭಕ್ತರು ತುಂಬು ಹೃದಯದಿಂದಲೇ ಮರಳಬೇಕು ಎಂಬುದು ನಮ್ಮ ಆಶಯ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನದಲ್ಲಿ ತಿಳಿಸಿದರು.
ಇತ್ತೀಚೆಗೆ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಬಾಳಿಕೆ ಶಂಕರನಾರಾಯಣ ಭಟ್ ಇವರ ನಿವಾಸದಲ್ಲಿ ಜರಗಿದ ಶ್ರೀ ಗುರುಭಿಕ್ಷಾ ಸೇವೆಯ ಬಳಿಕ ನಡೆದ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶ್ರೀ ಮಠದ ಪದ್ಧತಿಯಂತೆ ಧೂಳಿ ಪೂಜೆಯನ್ನು ನೆರವೇರಿಸಲಾಯಿತು.ನಂತರ ಪ್ರಸ್ತುತ ಬೆಂಗಳೂರು ನಿವಾಸಿಯಾಗಿರುವ ನೃತ್ಯ ವಿದುಷಿ ಕುಮಾರಿ ಐಶ್ವರ್ಯಾಳಿಂದ ನೃತ್ಯ ಸೇವೆ ಜರಗಿತು. ಶ್ರೀ ಕರಾರ್ಚಿತ ಶ್ರೀ ಸೀತಾ ರಾಮಚಂದ್ರ, ಚಂದ್ರಮೌಳೀಶ್ವರ, ರಾಜರಾಜೇಶ್ವರಿ ದೇವತಾರ್ಚನೆ, ಶ್ರೀ ಗುರುಭಿಕ್ಷಾ ಸೇವೆ, ಲಕ್ಷ್ಮೀ ನರಸಿಂಹ ಕರಾವಲಂಬನ ಸ್ತೋತ್ರ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ, ಶ್ರೀರಾಮ ಭಜನೆ ಮುಂತಾದ ಕಾರ್ಯಕ್ರಮಗಳು ಅಪಾರ ಸಂಖ್ಯೆಯ ಶಿಷ್ಯಭಕ್ತರ ಉಪಸ್ಥಿತಿಯಲ್ಲಿ ಸಾಂಗವಾಗಿ ಸಂಪನ್ನವಾಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಠದ ವಿವಿಧ ಸಮಾಜಮುಖೀ ಯೋಜನೆಗಳಾದ ಅಶೋಕೆಯ ಮೂಲ ಮಠ , ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಸಂಸ್ಥಾಪನೆ, ಗೋಸ್ವರ್ಗವೇ ಮೊದಲಾದವುಗಳಿಗೆ ದೇಣಿಗೆ ಸಮರ್ಪಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಶಿಷ್ಯ ಭಕ್ತರೆಲ್ಲರೂ ಅನುಗ್ರಹ ಮಂತ್ರಾಕ್ಷತೆ ಪಡೆದರು.