HEALTH TIPS

ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನಾಲ್ಕನೇ ದಿನ


        ಮುಳ್ಳೇರಿಯ: ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಾಲ್ಕನೇ ದಿನವಾದ ಭಾನುವಾರ ಬೆಳಗ್ಗೆ ಗಣಪತಿ ಹವನ, ಶ್ವಶಾಂತಿ ಹೋಮ ಮುಂತಾದ ವೈದಿಕ ಕಾರ್ಯಕ್ರಮಗಳ ನಂತರ ನಾಗಪ್ರತಿಷ್ಠೆ ನಡೆಯಿತು.
    ಬಳಿಕ ಭಾರತಾಂಬ ಭಜನಾ ಮಂದಿರ ಗಾಡಿಗುಡ್ಡೆ, ನರಸಿಂಹ ಮಠ ಚಲ್ಲಂತಡ್ಕ ತಲೆಬೈಲು, ಬಡಕಕೆರೆ ದುರ್ಗಾಪರಮೇಶ್ವರಿ ದೇವಸ್ಥಾನ ಮುಂತಾದ ಕಡೆಗಳಿಂದ ಹಸಿರುವಾಣಿ ಹೊರೆಕಾಣಿಕೆ ಶ್ರೀಕ್ಷೇತ್ರಕ್ಕೆ ಅಗಮಿಸಿತು.
     ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಸಾಧ್ವಿ ಶ್ರೀಮಾತಾನಂದಮಯೀ ಇವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ಕ್ಷೇತ್ರಕ್ಕೆ ಸ್ವಾಗತಿಸಲಾಯಿತು. ಕ್ಷೇತ್ರದಲ್ಲಿ ಮಧುಶ್ರೀ ಪಾತೇರಿ ನೇತೃತ್ವದ ಸ್ಥಳೀಯ ಮಕ್ಕಳ ನೃತ್ಯಾಭಜನಾ ತಂಡವನ್ನು ಸಾಧ್ವಿ ಅವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
     ಬಳಿಕ ನಡೆದ ಮಾತೃ ಸಮಾವೇಶದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷೆ ವಸಂತಿ ಟೀಚರ್ ಅಗಲ್ಪಾಡಿ ವಹಿಸಿದ್ದರು.  ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಮಾತಾನಂದಮಯೀ ಅವರು ದುಷ್ಟಸಂಹಾರ ಮತ್ತು ಶಿಷ್ಟರ ರಕ್ಷಣೆಗಾಗಿ ಅವತರಿಸಿದ ಜಗನ್ಮಾತೆಯ ರೂಪವೇ ಮಹಿಷಮರ್ಧಿನಿ. ಪ್ರತಿಯೊಬ್ಬ ತಾಯಿಯಲ್ಲಿ ದೇವರನ್ನು ಕಾಣುವ ಸಂಸ್ಕಾರ ನಮ್ಮದು. ಹೇಗೆ ಮರಗಳಿಗೆ ತಾಯಿಬೇರು ಪ್ರಧಾನವೋ ಹಾಗೆಯೇ ಹಿಂದೂ ಸಮಾಜವನ್ನು ಉತ್ತಮರೀತಿಯಲ್ಲಿ ಬಲಿಷ್ಠವಾಗಿ ಬೆಳೆಸುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯವಾಗಿದೆ ಎಂದು ನುಡಿದರು.
      ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ವಿದ್ಯಾಮೋಹನ್ ದಾಸ್ ರೈ ಬೆಳ್ಳೂರು ಮತ್ತು ಪುಷ್ಪಾ ಬಾಲಕೃಷ್ಣ ಮಂಗಳೂರು ಇವರು ಉಪಸ್ಥಿತರಿದ್ದರು.
       ಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣಗೈದ ಆಶಾ ದಿಲೀಪ್ ರೈ ಸುಳ್ಯಮೆ ಅವರು ಧಾರ್ಮಿಕ, ಸಾಮಾಜಿಕ ಮತ್ತು ಸಂಸ್ಕಾರಯುತ ಹಾದಿಯಲ್ಲಿ ಮುನ್ನಡೆದರೆ ದೇವರ ಒಲುಮೆ ಸಾಧ್ಯವಾಗುತ್ತದೆ. ತನ್ಮೂಲಕ ನಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂದರು.
    ಕುಂಬ್ಡಾಜೆ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಯಶೋದಾ ಎನ್, ಗ್ರಾಮ ಪಂಚಾಯತಿ ಸದಸ್ಯೆ  ನಳಿನಿ ಕೃಷ್ಣ ಶುಭಾಶಂಸನೆಗೈದರು. ಸಭೆಯಲ್ಲಿ ಶ್ರೀ ಮಹಿಷಮರ್ದಿನಿ ಮಾತೃಮಂಡಳಿ ಅಧ್ಯಕ್ಷೆ ಉಮಾವತಿ ರೈ, ಕುಂಬ್ಡಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಮಲ್ಲಿಕಾ ಪಿ. ರೈ, ಶ್ರೀಕ್ಷೇತ್ರದ ಕಾರ್ಯಕಾರಿ ಸಮಿತಿ ಸದಸ್ಯೆ ವೀಣಾ ಭಾಸ್ಕರ ಮವ್ವಾರು, ಪ್ರಧಾನ ಕಾರ್ಯದರ್ಶಿ ಶಶಿಪ್ರಭಾ ಗೋಸಾಡ  ಉಪಸ್ಥಿತರಿದ್ದರು. ಜಯಂತಿ ವಿ. ಗೋಸಾಡ ಸ್ವಾಗತಿಸಿ, ಕುಮಾರಿ ಶಶಿಕಲಾ ಪೆರಿಂಜೆ ವಂದಿಸಿದರು. ಹೇಮಲತಾ ರೈ ಮೇಗಿನ ಬೆಳಿಂಜ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries