ಪೆರ್ಲ: ಪ್ರೇಮಿಗಳ ದಿನದಂದು ಪ್ರೇಮಿ ನೀಡಿದ್ದು ಹೂವೋ ಹೂ ಗುಚ್ಛವೋ ಆಗಿರಬಹುದು. ಆದರೆ ಆ ವೀರ ದೇಶ ಪ್ರೇಮಿ, ಸೈನಿಕ ತನ್ನ ರಾಷ್ಟ್ರವನ್ನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ರಾಷ್ಟ್ರವನ್ನು ಪ್ರೀತಿಸಿದ್ದಾನೆ, ತನ್ನ ಜೀವವನ್ನೇ ರಾಷ್ಟ್ರಕ್ಕಾಗಿ ಅರ್ಪಿಸಿದ್ದಾನೆ. ಅಂತಹ ಈ ದಿನವನ್ನು ರಾಷ್ಟ್ರ ಪ್ರೇಮಿಗಳ ದಿನವನ್ನಾಗಿ ಎಲ್ಲೆಡೆಯೂ ಆಚರಿಸಬೇಕಿದೆ ಎಂದು ಮಲಯಾಳಂ ವಿಭಾಗದ ಉಪನ್ಯಾಸಕಿ ವಿನೀಷಾ ಎಸ್. ವಿ ಹೇಳಿದರು.
ಪುಲ್ವಾಮ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಸ್ಮೃತಿ ದಿನದ ಅಂಗವಾಗಿ ಕಾಲೇಜು ಯುನಿಯನ್ ನೇತೃತ್ವದಲ್ಲಿ ಪೆರ್ಲ ನಾಲಂದ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಉಪನ್ಯಾಸಕಿ ವಿನೀಷಾ ಅವರು ಮಾತನಾಡಿದರು.
ಫೆ. 14 ಪ್ರೇಮಿಗಳ ದಿನ ಮಾತ್ರವಲ್ಲ. ರಾಷ್ಟ್ರದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ತಾಯಿ ಭಾರತಿಗೆ ಸಮರ್ಪಿಸಿದ ವೀರ ಯೋಧರ ಸ್ಮೃತಿ ದಿನವೂ ಆಗಿದೆ ಎಂಬುದನ್ನು ಯುವಜನಾಂಗ ಅರಿಯಬೇಕಿದೆ. ಈ ವೀರ ಯೋಧರ ನಿಸ್ವಾರ್ಥ ಸೇವೆ, ತ್ಯಾಗ, ಬಲಿದಾನವನ್ನು ಸ್ಮರಿಸುವ ಕಾರ್ಯ ಯುವಜನಾಂಗದಿಂದ ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಭಾರ ಪ್ರಾಂಶುಪಾಲ ಕೇಶವ ಶರ್ಮ ಮಾತನಾಡಿ, 40ರಷ್ಟು ಸೈನಿಕರ ಪ್ರಾಣವನ್ನು ಭಯೋತ್ಪಾದಕರು ಬಲಿ ತೆಗೆದುಕೊಂಡ ಈ ದಿನ ವೀರ ಯೋಧರಿಗೆ ಸಂತಾಪ ಹಾಗೂ ಗೌರವ ಸೂಚಿಸಬೇಕಾದ ದಿನ. ಸೈನಿಕರ ತ್ಯಾಗ ಬಲಿದಾನವನ್ನು ಒಂದು ದಿನ ಗೌರವಿಸಿದರೆ, ಸ್ಮರಿಸಿದರೆ ಸಾಲದು, ಪ್ರತಿ ದಿನವೂ ಪ್ರತಿ ಕ್ಷಣವೂ ಸ್ಮರಿಸಬೇಕು ಎಂದರು. ಪ್ರೇಮಿಗಳ ದಿನವನ್ನು ಆಚರಿಸದೇ, ಪುಲ್ವಾಮ ದಾಳಿಯಲ್ಲಿ ಮರಣವನ್ನಪ್ಪಿದ ಬಲಿದಾನಿಗಳ ಸ್ಮೃತಿ ದಿನವನ್ನು ಆಚರಿಸಿ ದೇಶ ಪ್ರೇಮವನ್ನು ಮೆರೆದ ಕಾಲೇಜು ಯುನಿಯನ್ ಗೆ ಅಭಿನಂದನೆ ಸಲ್ಲಿಸಿದರು.
ಕಾಲೇಜ್ ಯೂನಿಯನ್ ಅಧ್ಯಕ್ಷೆ ರಶ್ಮಿ ಕೆ. ಮಾತನಾಡಿ, ಯೋಧರು ಹಗಳಿರುಳೆನ್ನದೇ ಗಡಿಯನ್ನು ಕಾಯುತ್ತಿರುವ ಕಾರಣ ನಾವು ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿದ್ದೇವೆ. ಸೈನಿಕರು ರಾಷ್ಟ್ರಕ್ಕಾಗಿ, ನಮ್ಮ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ, ಹೊರತು ಯಾವುದೇ ಸ್ವಾರ್ಥ ಭಾವನೆ ಅವರಲ್ಲಿ ಇರಲಿಲ್ಲ. ಆದುದರಿಂದ ನಮಗಾಗಿ ಪ್ರಾಣವನ್ನು ಅರ್ಪಿಸಿದ ನಮ್ಮ ಸೈನಿಕರ ಸ್ಮೃತಿ ದಿನವನ್ನು ಆಚರಿಸುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ ಎಂದರು. ಯುನಿವರ್ಸಿಟಿ ಯುನಿಯನ್ ಕೌನ್ಸಿಲರ್ ಕವಿತಾ ಸ್ವಾಗತಿಸಿ, ಯುನಿಯನ್ ಕಾರ್ಯದರ್ಶಿ ಸುದೀಶ್ ವಂದಿಸಿದರು.