ಬದಿಯಡ್ಕ: ಗಡಿನಾಡು ಕಾಸರಗೋಡು ಪ್ರದೇಶ ಕನ್ನಡ ಸಾಂಸ್ಕøತಿಕ ಲೋಕಕ್ಕೆ ಕೊಟ್ಟ ಉದ್ಧಾಮ ಪಂಡಿತಶ್ರೇಷ್ಟರ ಸಾಲಿನಲ್ಲಿ ವಾಚಿಕಲೋಕದ ರಸಋಷಿ ಶೇಣಿ ಗೋಪಾಲಕೃಷ್ಣ ಭಟ್ಟರು ಪ್ರಮುಖರಾಗಿದ್ದು ಅವರ ಸ್ಮøತಿಗಾಗಿ ಕಾಸರಗೋಡಿನ ಸ್ಪಂದನ ನಿರಾಶದಾಯಕವಾಗಿದೆ. ಮಾತಿಗೂ ಮೌನಕ್ಕೂ ಅರ್ಥ ವ್ಯಾಖ್ಯೆಗಳನ್ನೊದಗಿಸಿ ವಾಙ್ಮಯ ಲೋಕದ ಮಹಾಚಿಂತಕರೆನಿಸಿದ ಶೇಣಿಯವರನ್ನು ಶಾಶ್ವತವಾಗಿ ನೆನಪಿಡುವ ಮತ್ತು ಮುಂದಿನ ಪೀಳಿಗೆ ಅವರ ಹೆಸರಲ್ಲಿ ಸಾಂಸ್ಕøತಿಕ ಮತ್ತು ಬೌದ್ಧಿಕವಾಗಿ ತೊಡಗಿಸಿಕೊಳ್ಳಲು ಒದಗುವ ಮಾದರಿಯಲ್ಲಿ ಗಡಿನಾಡಿನಲ್ಲಿ ಶೇಣಿ ಸ್ಮøತಿಯ ಕಲಾ ಭವನ ಅಸ್ತಿತ್ವಕ್ಕೆ ಬರಬೇಕು ಎಂದು ಬರಹಗಾರ, ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಎಂ.ನಾ. ಚಂಬಲ್ತಿಮಾರ್ ನುಡಿದರು.
ಶೇಣಿ ರಂಗಜಂಗಮ ಟ್ರಸ್ಟ್ ಕಾಸರಗೋಡು ಮತ್ತು ಯಕ್ಷಸ್ನೇಹಿ ಬಳಗ ಪೆರ್ಲ ಇದರ ಜಂಟಿ ಆಶ್ರಯದಲ್ಲಿ ಏತಡ್ಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರುದಿನಗಳ ಸರಣಿ ತಾಳಮದ್ದಳೆಗೆ ಚಾಲನೆ ಇತ್ತು ಅವರು ಶೇಣಿ ಸಂಸ್ಮರಣೆ ಮಾಡಿ ಮಾತನಾಡಿದರು.
ಶೇಣಿಯವರ ಹೆಸರಲ್ಲಿ ಕಲಾಭವನ, ಯಕ್ಷಗಾನ ಮ್ಯೂಸಿಯಂ ಸ್ಥಾಪಿಸುವುದು ಅಗತ್ಯವಾಗಿದ್ದು, ಕರ್ನಾಟಕ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾಪೋಷಕ, ಸಂಘಟಕ ಅರವಿಂದ ಕುಮಾರ್ ಅಲೆವೂರಾಯ ನೇರಪ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾಗವತ ಡಾ.ಸತೀಶ ಪುಣಿಂಚಿತ್ತಾಯ ಪೆರ್ಲ ಸನ್ಮಾನಿತರ ಕುರಿತು ಅಭಿನಂದನಾ ಭಾಷಣ ಮಾಡಿದರು.
ಸನ್ಮಾನ ಸ್ವೀಕರಿಸಿ ಕೃತಜ್ಞತಾ ನುಡಿಗಳನ್ನಾಡಿದ ಅರವಿಂದ ಕುಮಾರ ಅಲೆವೂರಾಯರು ತನ್ನ ಜೀವನದ ಗೆಲುವುಗಳಿಗೆ ಮುನ್ನುಡಿ ಬರೆದು, ಅನೇಕಾನೇಕ ಬಹುಮಾನಗಳನ್ನು ಪಡೆಯುತ್ತಲೇ ಬಂದ ಹುಟ್ಟೂರು ಏತಡ್ಕ ಶಾಲೆಯ ವೇದಿಕೆಯಲ್ಲಿ ಸುಮನಸ್ಸಿನ ಸನ್ಮಾನ ಸ್ವೀಕರಿಸಿರುವುದು ಜೀವನದ ಅತ್ಯಂತ ಸಂತಸದ ಸಂಗತಿ ಎಂದರು. ಜಿಲ್ಲಾ ವಾರ್ತಾ ಇಲಾಖೆ ಛಾಯಾಗ್ರಾಹಕ ಅಖಿಲೇಶ್ ನಗುಮೊಗಂ, ಏತಡ್ಕ ಶಾಲಾ ಮುಖ್ಯೋಪಾದ್ಯಾಯಿನಿ ಸುಶೀಲಾ .ಬಿ. ಅತಿಥಿಗಳಾಗಿ ಪಾಲ್ಗೊಂಡರು. ಶೇಣಿ ರಂಗಜಂಗಮ ಟ್ರಸ್ಟ್ ಸಂಚಾಲಕ, ಕಲಾವಿದ ವೇಣುಗೋಪಾಲ ಭಟ್ ಶೇಣಿ ಸ್ವಾಗತಿಸಿ ಆಶಯ ಮಾತುಗಳನ್ನಾಡಿದರು.
ಬಳಿಕ ಮೊದಲ ದಿನದಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ ತಾಳಮದ್ದಳೆ ದಶರಥನ ಮಾನಸಿಕ ತೊಳಲಾಟದ ಪರಿಸ್ಥಿತಿಯನ್ನು ಅನಾವರಣಗೊಳಿಸುವಲ್ಲಿ ಸಮರ್ಥವಾಗಿ ಜನಮನಸೂರೆಗೊಂಡಿತು. ತಾಳಮದ್ದಳೆಯಲ್ಲಿ ಭಾಗವತರಾಗಿ ಡಾ. ಸತೀಶ ಪುಣಿಂಚಿತ್ತಾಯ, ಚೆಂಡೆಯಲ್ಲಿ ಶ್ರೀಧರ ಎಡಮಲೆ, ಮದ್ದಲೆಯಲ್ಲಿ ಅನೂಪ ಸ್ವರ್ಗ ಪಾಲ್ಗೊಂಡರು. ಮುಮ್ಮೇಳದಲ್ಲಿ ಜಬ್ಬಾರ್ ಸಮೋ ಸಂಪಾಜೆ(ದಶರಥ), ಶೇಣಿ ವೇಣುಗೋಪಾಲ ಭಟ್(ಮಂಥರೆ), ಉದಯಶಂಕರ ಭಟ್ ಅಮೈ(ಕೈಕೇಯಿ), ರಾಜಾರಾಮ ಮದ್ಯಸ್ಥ(ಶ್ರೀರಾಮ) ಎಂ.ನಾ. ಚಂಬಲ್ತಿಮಾರ್(ಲಕ್ಷ್ಮಣ) ಪಾಲ್ಗೊಂಡರು.