ಕಾಸರಗೋಡು: ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಚಟುವಟಿಕೆ ನಡೆಸುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಕಾಸರಗೋಡು ವಲಯದ ಮಾಸಿಕ ಸಭೆ ಕಾಸರಗೋಡು ವಲಯದ ಮನ್ನಿಪ್ಪಾಡಿ ಘಟಕ ಕಾರ್ಯದರ್ಶಿ ಶ್ರೀ ಮಹಾಲಿಂಗೇಶ್ವರ ಭಟ್ ಅವರ ನಿವಾಸದಲ್ಲಿ ಜರಗಿತು.
ಧ್ವಜಾರೋಹಣ, ಗುರುವಂದನೆ,ಶಂಖನಾದ,ಶ್ರೀ ಲಕ್ಷ್ಮೀ ನೃಸಿಂಹ ಕರಾವಲಂಬಮ್ ಸ್ತೋತ್ರ ಪಠಣದೊಂದಿಗೆ ಕಾರ್ಯಕ್ರಮ ಜರುಗಿತು. ವಲಯ ಉಪಾಧ್ಯಕ್ಷ ಶ್ರೀ ಬಿ. ಮಹಾಬಲ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಬಿಂದು ಸಿಂಧು ಪ್ರಧಾನ ಉಳುವಾನ ಈಶ್ವರ ಭಟ್ ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಮಹಾಲಿಂಗೇಶ್ವರ ಭಟ್ ವರದಿ, ಕೋಶಾಧಿಕಾರಿ ರಮೇಶ ಏತಡ್ಕ ಲೆಕ್ಕ ಪತ್ರ ಮಂಡಿಸಿದರು. ಬಳಿಕ ವಿಭಾಗಾವಾರು ವರದಿ ಸಲ್ಲಿಸಲಾಯಿತು. ದೀಪ ಕಾಣಿಕೆ, ಬೆಳೆ ಸಮರ್ಪಣೆಗಳ ಮಾಹಿತಿ ವಿನಿಮಯ ಮಾಡಲಾಯಿತು.
ಫೆಬ್ರವರಿ 16ರಂದು ಮಂಗಳೂರು ಪುರಭವನದಲ್ಲಿ ಜರುಗಲಿರುವ ವಿ. ವಿ. ವಿ. ಯ ಸಂವಾದ ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಸಹಕರಿಸಲು ತೀರ್ಮಾನಿಸಲಾಯಿತು . ಕಾರ್ಯದರ್ಶಿಯವರು ಮಂಡಲ ಸುತ್ತೋಲೆಯನ್ನು ವಾಚಿಸಿ, ಫೆಬ್ರವರಿ 17ರಂದು ಮಾಣಿಮಠ ದಲ್ಲಿ ನಡೆಯುವ ಶ್ರೀ ರಾಮ ಪಟ್ಟಾಭಿಷೇಕ ಕಾರ್ಯಕ್ರಮದ ಮಾಹಿತಿಗಳನ್ನಿತ್ತರು.
ಮಾರ್ಚ್ 1ರಂದು ಭಾನ್ಕುಳಿ ಗೋಸ್ವರ್ಗದಲ್ಲಿ ಜರುಗುವ ಸರ್ವಸೇವಕ ಸಮಾವೇಶದಲ್ಲಿ ವಲಯದ ಪದಾಧಿಕಾರಿಗಳು, ಗುರಿಕ್ಕಾರರು ಹಾಗೂ ಗುರುಭಕ್ತರನ್ನು ಭಾಗವಹಿಸುವಂತೆ ಮಾಡಲು ನಿರ್ಣಯಿಸಲಾಯಿತು. ಮಾರ್ಚ್ 4ರಂದು ಹೊಸನಗರದ ಮಹಾನಂದಿ ಗೋಲೋಕದಲ್ಲಿ ಕೃಷ್ಣಾರ್ಪಣಮ್ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು, ಈ ಸಂದರ್ಭದಲ್ಲಿ ಛತ್ರಸಮರ್ಪಣೆ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿಮಾಡಲಾಯಿತು.
ಮಂಡಲ ಬಿಂದು ಸಿಂಧು ಪ್ರಧಾನ ಶ್ರೀ ಉಳುವಾನ ಈಶ್ವರ ಭಟ್ ಅವರು ಮಾತನಾಡಿ, ಹೊನ್ನಾವರ ಹೈಗುಂದದ ಶ್ರೀ ದುಗಾರ್ಂಬಿಕಾ ದೇವಸ್ಥಾನದ ಅಷ್ಟಬಂಧ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ವಲಯದ ಹೆಚ್ಚಿನ ಗುರುಭಕ್ತರು ಪಾಲ್ಗೊಳ್ಳುವಂತೆ ಸೂಚನೆ ನೀಡಿದರು.
ಕೃಷ್ಣಾರ್ಪಣಮ್ ಹಾಗೂ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮಗಳ ಅಕ್ಷತಾ ಅಭಿಯಾನ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಯಿತು. ರಾಮತಾರಕ ಮಂತ್ರ, ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯಗೊಂಡಿತು.