ಬದಿಯಡ್ಕ: ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಆಶ್ರಯದಲ್ಲಿ `ಮಧೂರ್ ದ ಮದನಂತೇಶ್ವರ' ಆಲ್ಬಂ ಸಾಂಗ್ ಬಿಡುಗಡೆ ಸಮಾರಂಭ ನೀರ್ಚಾಲು ವಲಯ ಸಮಿತಿ ಕಚೇರಿಯಲ್ಲಿ ಜರಗಿತು.
ಸಮಿತಿಯ ಜಿಲ್ಲಾಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದ್ದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಆಲ್ಬಂ ಸಾಂಗ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ ಮಧೂರು ಕ್ಷೇತ್ರದ ಮಹಾಗಣಪತಿ ದೇವರ ಕುರಿತಾದ ಭಕ್ತಿಗೀತೆಗಳ ಹಲವು ಧ್ವನಿಸುರುಳಿಗಳು ಈಗಾಗಲೇ ಜನಪ್ರಿಯಗೊಂಡಿವೆ. ಆದರೆ ಮದರು ಮಹಾಮಾತೆಯ ಕುರಿತಾದ ಸಾಹಿತ್ಯವಿರುವ ಆಲ್ಬಂಗಳು ಪ್ರಚಾರಕ್ಕೆ ಬಂದಿಲ್ಲ. ಇದೀಗ ಯೂಟ್ಯೂಬಿನಲ್ಲಿ ಇಂತಹ ಗೀತೆಗಳು ಪ್ರಚಾರ ಪಡೆಯುತ್ತಿರುವುದು ಸ್ವಾಗತಾರ್ಹವೆಂದು ಹೇಳಿದರು.
ಕಾಲ್ಗೆಜ್ಜೆನಾದ ದೀಕ್ಷಿತಾ ಧರ್ಮತ್ತಡ್ಕ ಸಾಹಿತ್ಯರಚಿಸಿ ಸಂಯೋಜಿಸಿದ ಮಧೂರ್‍ದ ಮದನಂತೇಶ್ವರ ಆಲ್ಬಂ ಸಾಂಗ್‍ಗೆ ಸಂಗೀತ ನೀಡಿದವರು ಪ್ರವೀಣ್ ಡಿ.ರಾವ್. ಗಾಯನದಲ್ಲಿ ಆನಂದ ಕುಮಾರ್ ಕಕ್ಕಿಂಜೆ, ಅಕ್ಷತಾ ಕನಿಯಾಲ, ಸುಮಿತ್ರಾ ಕನಿಯಾಲ ಹಾಗೂ ಮಿಥುನ್ ರಾಜ್ ಪುತ್ತೂರು ಧ್ವನಿಮುದ್ರಣದಲ್ಲಿ ಸಹಕರಿಸಿದರು. ಬಿಡುಗಡೆ ಸಮಾರಂಭದಲ್ಲಿ ಮದರು ಮಹಾಮಾತೆ ಮೊಗೇರ ಸಮಾಜದ ಗೌರವ ಸಲಹೆಗಾರರಾದ ರಾಮಪ್ಪ ಮಂಜೇಶ್ವರ, ಡಿ.ಕೃಷ್ಣ ದರ್ಬೆತ್ತಡ್ಕ, ನಿಟ್ಟೋಣಿ ಬಂದ್ಯೋಡು, ಕೋಶಾಧಿಕಾರಿ ಡಿ.ಕೃಷ್ಣದಾಸ್, ಉಪಾಧ್ಯಕ್ಷ ಸುರೇಶ್ ಅಜಕ್ಕೋಡು, ರಾಮ ಪಟ್ಟಾಜೆ, ಹರಿಶ್ಚಂದ್ರ ಪುತ್ತಿಗೆ, ಸುಂದರ ಬಾರಡ್ಕ, ಡಿ.ಗೋಪಾಲ, ಸುಂದರ ಮಾಳಂಗಾಯಿ, ರಾಜೇಶ್ ಪೆರಿಯಡ್ಕ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಡಿ.ಶಂಕರ ಸ್ವಾಗತಿಸಿ, ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು.