ಕಾಸರಗೋಡು: ಕರೊನಾ ವೈರಸ್ ವ್ಯಾಪಿಸುತ್ತಿರುವ ಚೀನಾದಿಂದ ಆಗಮಿಸಿರುವ ಇಪ್ಪತ್ತೈದರ ಹರೆಯದ ಯುವಕನಿಗೆ ತಿರುವನಂತಪುರದಲ್ಲಿ ವಸತಿ ಕಲ್ಪಿಸಲು ಯಾರೂ ತಯಾರಾಗದ ಹಿನ್ನೆಲೆಯಲ್ಲಿ ಈತನನ್ನು ಜನರಲ್ ಆಸ್ಪತ್ರೆಯ ಐಸೊಲೇಶನ್ ವಾರ್ಡಿಗೆ ದಾಖಲಿಸಲಾಗಿದೆ.
ಚೀನಾ ನಿವಾಸಿ ಜಿಶೋಯು ಶಾವೋ ಎಂಬಾತ ದೆಹಲಿಯಿಂದ ತಿರುವನಂತಪುರಕ್ಕೆ ಆಗಮಿಸಿದ್ದು, ಈತ ಚೀನಾ ನಿವಾಸಿಯೆಂದು ಮಾಹಿತಿ ಲಭಿಸುತ್ತಿದ್ದಂತೆ ಯಾವ ವಸತಿಗೃಹದವರೂ ಈತನನ್ನು ಸೇರಿಸಿಕೊಳ್ಳಲು ಮುಂದಾಗಲಿಲ್ಲ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಶಾವೋ ಸೂಕ್ತ ವಸತಿ ಕಲ್ಪಿಸುವಂತೆ ಆಗ್ರಹಿಸಿದ್ದನು. ಈ ಮಧ್ಯೆ ನಂತರ ಈತನನ್ನು ಐಸೊಲೇಶನ್ ವಾರ್ಡಿಗೆ ಸ್ಥಳಾಂತರಿಸಲಾಗಿದೆ. ಈತನ ರಕ್ತದ ಮಾದರಿಯನ್ನು ತಪಾಸಣೆ ನಡೆಸುವುದರ ಜತೆಗೆ ಈತನ ವಿರುದ್ಧ ನಿಗಾವಹಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ. ಜನವರಿ 23ರಂದು ಚೀನಾದಿಂದ ದೆಹಲಿಗೆ ಆಗಮಿಸಿದ್ದ ಈತ, ಮಂಗಳವಾರ ತಿರುವನಂತಪುರಕ್ಕೆ ಆಗಮಿಸಿದ್ದಾನೆ. ಈ ಮಧ್ಯೆ ತಿರುವನಂತಪುರದ ರಾಜೀವ್‍ಗಾಂಧಿ ಬಯೋಟೆಕ್ನಾಲಜಿಯಲ್ಲಿ ರಕ್ತತಪಾಸಣೆ ನಡೆಸಿದ ವರದಿ ಶಾವೋ ಕೈಯಲ್ಲಿದ್ದು, ಇದರಲ್ಲಿ ಕರೊನಾ ವೈರಸ್ ಬಾಧಿಸಿರುವ ಬಗ್ಗೆ ಯವುದೇ ಮಾಹಿತಿಯಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಈತನನ್ನು ಐಸೊಲೇಶನ್ ವಾರ್ಡ್‍ಗೆ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.