ಪೆರ್ಲ: ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಹದಿನೈದನೇ ವಾರ್ಷಿಕೋತ್ಸವ, ಪಡ್ರೆಚಂದು ಜನ್ಮ ಶತಮಾನೋತ್ಸವ, ವಿಚಾರ ಸಂಕಿರಣ, ಸಂಸ್ಮರಣೆ, ನೂರರ ಅಭಿನಂದನೆ, ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮಕ್ಕಳ ಯಕ್ಷಗಾನ ಬಯಲಾಟವು ಫೆ.22, 28 ಹಾಗೂ 29 ರಂದು ನಾಟ್ಯ ತರಬೇತಿ ಕೇಂದ್ರ ಪರಿಸರದಲ್ಲಿ ಆಯೋಜಿಸಲಾಗಿದ್ದು ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕೇಂದ್ರದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಸಾಹಿತಿ ಡಾ.ಎಸ್.ಎನ್.ಭಟ್ ಪೆರ್ಲ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಅವರು ಈ ಸಂದರ್ಭ ಮಾತನಾಡಿ ಸವಾಲುಗಳ ಮಧ್ಯೆಯೂ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ತೆಂಕುತಿಟ್ಟಿನ ಏಕೈಕ ನಾಟ್ಯ ತರಬೇತಿ ಶಾಲೆಯಾಗಿ ಬೆಳೆದುನಿಂತಿರುವ ಕೇಂದ್ರದ ಅವಿರತ ಶ್ರಮ ಶ್ಲಾಘನೀಯ. ಗುರು ಸಬ್ಬಣಕೋಡಿ ರಾಮ ಭಟ್ ಅವರ ತ್ಯಾಗ, ಕಲಾಸ್ನೇಹಗಳಿಂದ ಇದು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರದ ಹಿಮ್ಮೇಳ ಗುರು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಹರಿಪ್ರಸಾದ್ ಶೆಟ್ಟಿ, ಶ್ಯಾಮಸುಂದರ ಭಟ್, ಶ್ಯಾಮ ಭಟ್, ಮಾಧವ, ಶರಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಕೇಂದ್ರದ ನಿರ್ದೇಶಕ, ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಸ್ವಾಗತಿಸಿ, ಹರೀಶ್ ಮಾಸ್ತರ್ ಗೋಳಿತ್ತಡ್ಕ ವಂದಿಸಿದರು. ವಿದ್ಯಾರ್ಥಿಗಳು, ಹೆತ್ತವರು ಭಾಗವಹಿಸಿದ್ದರು.