HEALTH TIPS

ಶಿಸ್ತು ಧರ್ಮವನ್ನು ಉಳಿಸುತ್ತದೆ : ಡಾ. ಡಿ.ವೀರೇಂದ್ರ ಹೆಗ್ಗಡೆ- ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ


         ಮುಳ್ಳೇರಿಯ: ದೈವ ದೇವರುಗಳಿಗೆ ಮಾನವ ಸಲ್ಲಿಸುವ ಸೇವೆಗಳಿಂದ ಸಂತಸ ಉಂಟಾಗುತ್ತದೆ. ತತ್ಪಲವಾಗಿ ಸುಭಿಕ್ಷ ನೆಲೆಗೊಳ್ಳುತ್ತದೆ. ಸುಭಿಕ್ಷವನ್ನು ಸದಾ ಕಾಲ ಕಾಪಿಡುವಲ್ಲಿ ಶಿಸ್ತನ್ನು ರೂಢಿಸುವ ಅಗತ್ಯ ಇದೆ. ಇದು ಜೀವನ ಧರ್ಮವೂ ಆಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕರೆನೀಡಿದರು.
           ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಆರಂಭಗೊಂಡಿರುವ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವದ ಧಾರ್ಮಿಕ ಸಭೆಯನ್ನು ಶುಕ್ರವಾರ ಸಂಜೆ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
       ಭಾರತದ ಆಧ್ಯಾತ್ಮಿಕ ತಳಹದಿ ಜಾಗತಿಕವಾಗಿ ಶ್ರೇಷ್ಠವಾದುದು ಎಂದ ಅವರು, ರಾಷ್ಟ್ರದಲ್ಲೇ ದಕ್ಷಿಣ ಭಾರತ, ಅದರಲ್ಲೂ ಕೇರಳ ತಂತ್ರಾಗಮ ಶಾಸ್ತ್ರದ ಅನುಸರಣೆಯ ಮೂಲಕ ಅಪೂರ್ವ ನಡಾವಳಿಕೆಗಳಿಂದ ಸನಾತನತೆಯನ್ನು ಎತ್ತಿಹಿಡಿದಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಜೀವನದ ಸುಖ-ಕಷ್ಟಗಳನ್ನು ಸಮಾನವಾಗಿ ಪರಿಭಾವಿಸಿ ಮುನ್ನಡೆಯುವ ದೃಢತೆಯ ಧೀಶಕ್ತಿಯನ್ನು ಭಗವಂತ ದಯಪಾಲಿಸುತ್ತಾನೆ.ಅಂತಹ ಅಂತಃಶಕ್ತಿ ಪ್ರಾಪ್ತಿಗೆ ನಮ್ಮ ಆರಾಧನಾಲಯಗಳು, ಆರಾಧನೆಗಳು ಸುಗಮವಾಗಿ ಸಾಗುತ್ತಿರಬೇಕು. ದೇವಾಲಯಗಳ ಮೂಲಕ ಹೃದಯವಂತಿಕೆ ಉದ್ದೀಪನಗೊಳ್ಳಲಿ, ನೆಮ್ಮದಿ ಪ್ರಾಪ್ತವಾಗಲಿ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
       ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರು ಆಶೀರ್ವಚನವನ್ನು ನೀಡಿ, ದೇವಾಲಯಗಳು ಪೂಜಾದಿಗಳಿಗೆ ಮಾತ್ರ ಸೀಮಿತವಾಗಿರದೆ ನೊಂದವರಿಗೆ ನೆಮ್ಮದಿಯನ್ನು ನೀಡುವ ತಾಣವಾಗಿದೆ. ಜೀವನದಲ್ಲಿ ದುಃಖಕ್ಕೆ ಕಾರಣವಾದ ಅಂಶವನ್ನು, ತಪ್ಪುಗಳನ್ನು ದೇವರಲ್ಲಿ ನಿವೇದಿಸಿಕೊಂಡಾಗ ನೆಮ್ಮದಿ ಪ್ರಾಪ್ತವಾಗುತ್ತದೆ. ಈ ಮೂಲಕ ಭಕ್ತ- ಭಗವಂತನ ಸಂಪರ್ಕ ಕಲ್ಪಿಸುವ ಮಾಧ್ಯಮ ಆರಾಧನಾ ಕೇಂದ್ರಗಳಾಗಿದ್ದು, ಶಕ್ತಿ, ಯುಕ್ತಿಗಳ ಮೂಲಕ ಸತ್ಯದ ಬೆಳಕನ್ನು ತೋರಿಸಿಕೊಡುತ್ತದೆ. ಸಾತ್ವಿಕ ಚೈತನ್ಯಗಳನ್ನು ರೂಢಿಸಿಕೊಂಡರೆ ದೇವಚೈತನ್ಯ ವೃದ್ಧಿಯಾಗಿ ಸಾನ್ನಿಧ್ಯಪೂರ್ಣವಾಗಿರುತ್ತದೆ. ಹಿರಿಯರು ದೇವಾಲಯಗಳನ್ನು ನಿರ್ಮಿಸುವ ಮೂಲಕ ನೆಮ್ಮದಿಯ ತಾಣಗಳನ್ನು ಕಲ್ಪಸಿದ್ದಾರೆ ಎಂದರು.
        ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿ, ತಿಮ್ಮಪ್ಪ ರೈ ಕುಂಬ್ಡಾಜೆ, ಆನುವಂಶಿಕ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು ಗೌರವ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ವಸಂತ ಪೈ ಬದಿಯಡ್ಕ, ಮಧುಕರ ರೈ ಕೊರೆಕ್ಕಾನ ಪಾಲ್ಗೊಂಡು ಶುಭಹಾರೈಸಿದರು. ಹಿರಿಯರಾದ ಅನಂತ ಭಟ್ ಕೆ., ಐತ್ತಪ್ಪ ಮವ್ವಾರು, ನಾರಾಯಣ ರೈ ಕುದ್ಕಾಡಿ, ನ್ಯಾಯವಾದಿ ಪುರುಷೋತ್ತಮ ಭಟ್, ಎಂ ಪ್ರಭಾಕರ ರೈ, ಸತ್ಯಮೂರ್ತಿ ಅಮ್ಮಣ್ಣಾಯ ಪಾವೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಮಹಿಷಮರ್ಧಿನಿ ಸೇವಾಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಸುಧಾಮ ಗೋಸಾಡ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ವೇಣುಗೋಪಾಲ ಕಳೆಯತ್ತೋಡಿ ವಂದಿಸಿದರು. ಅಧ್ಯಾಪಕ ಹರ್ಷಕುಮಾರ ರೈ ಬೆಳಿಂಜ ನಿರೂಪಿಸಿದರು. ರಾತ್ರಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ವೈಷ್ಣವೀ ನಾಟ್ಯಾಲಯ ಪುತ್ತೂರು ಇವರ ಶಿಷ್ಯವೃಂದದವರಿಂದ `ನಾಟ್ಯರಂಜಿನಿ' ಕಾರ್ಯಕ್ರಮ ಪ್ರದರ್ಶನಗೊಂಡಿತು.
      ವಿಶೇಷತೆ:
   ಉದ್ಘಾಟಿಸಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು, ಕಾಸರಗೋಡಿನ ವಿಶೇಷತೆಯನ್ನು ಉಲ್ಲೇಖಿಸಿ ತುಳುನಾಡಿನ ಐತಿಹ್ಯಗಳ ಪ್ರಧಾನ ಸಾಕ್ಷ್ಯಗಳಾದ ತುಳು ಶಾಸನ ಗೋಸಾಡ ಶ್ರೀಕ್ಷೇತ್ರದ ಬಳಿ ಇರುವ ಬಗ್ಗೆ ಉಲ್ಲೇಖಿಸಿದರು. ಜೊತೆಗೆ ತುಳು ಭಾಷೆಯ ಮೊದಲ ಗ್ರಂಥವೂ ಲಭ್ಯವಾಗಿರುವುದು ಕಾಸರಗೋಡಿನಲ್ಲಿ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ತೌಳವ ಬೇರು ಅತ್ಯಪೂರ್ವವಾದುದು ಎಂದು ಬಣ್ಣಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries