ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯಹೆದ್ದಾರಿ ಅಭಿವೃದ್ಧಿಕಾರ್ಯ ಬಿರುಸಿನಿಂದ ಸಾಗುವ ಮಧ್ಯೆ, ರಸ್ತೆಬದಿಯ ಮರಗಳ ವ್ಯಾಪಕ ಮಾರಣಹೋಮವೂ ನಡೆಯುತ್ತಿದೆ. ಈಗಾಗಲೇ ಪೆರ್ಲ ಪೇಟೆಯಲ್ಲಿ ಒಂದಷ್ಟು ಮರಗಳನ್ನು ಕಡಿದುರುಳಿಸಲಾಗಿದ್ದು, ಮತ್ತಷ್ಟು ಮರಗಳನ್ನು ಕಡಿಯಲು ಗುರುತು ಹಾಕಲಾಗಿದೆ.
ನೂರರಿಂದ ನೂರೈವತ್ತು ವರ್ಷ ಪ್ರಾಯದ ಮರಗಳೂ ಇದರಲ್ಲಿ ಒಳಗೊಂಡಿದೆ. ಚೆರ್ಕಳ-ಕಲ್ಲಡ್ಕ ರಸ್ತೆ ಮೆಕ್ಕಡಾಂ ಡಾಂಬರೀಕರಣ ನಡೆಯುವ ಮಧ್ಯೆ, ರಸ್ತೆಗೆ ಹಾನಿಯುಂಟುಮಾಡಬಹುದೆಂಬ ಕಾರಣ ನೀಡಿ ಈ ಮರಗಳನ್ನು ಕಡಿಯಲಾಗುತ್ತಿದೆ. ಕೆಲವು ಮರಗಳು ರಸ್ತೆಯಿಂದ ಕೆಲವು ಮೀಟರ್ ದೂರದಲ್ಲಿದ್ದು, ಇವುಗಳನ್ನೂ ಕಡಿದುರುಳಿಸಲು ಗುರುತು ಹಾಕಲಾಗಿದೆ. ಜಿಲ್ಲೆಯ ವಿವಿಧೆಡೆ ಇದಕ್ಕಿಂತ ಅಪಾಯ ಹಾಗೂ ಹಾನಿಯುಂಟುಮಾಡುವ ರೀತಿಯಲ್ಲಿರುವ ಮರಗಳನ್ನು ರಸ್ತೆಬದಿ ಉಳಿಸಿಕೊಂಡು ಅದೆಷ್ಟೋ ಕಾಮಗಾರಿ ನಡೆಸಲಾಗಿದ್ದರೂ, ಚೆರ್ಕಳ-ಕಲ್ಲಡ್ಕ ರಸ್ತೆ ಅಂಚಿಗಿರುವ ಮರಗಳನ್ನು ವ್ಯಾಪಕವಾಗಿ ಕಡಿದುರುಳಿಸುತ್ತಿರುವುದು ಪರಿಸರ ಪ್ರೇಮಿಗಳ ಟೀಕೆಗೂ ಕಾರಣವಾಗಿದೆ.
ಮರಗಳನ್ನು ಕಡಿದುರುಳಿಸುವಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಾಚರಿಸುತ್ತಿದೆ. ಆದರೆ ಸಸಿನೆಟ್ಟು ಪೋಷಣೆ ಮಾಡುವ ಯಾವುದೇ ಯೋಜನೆ ಇವರಲ್ಲಿಲ್ಲ. ಪರಿಸರ ಪ್ರೇಮಿಗಳು ರಸ್ತೆ ಬದಿ ಸಸಿ ನೆಡಲು ತೀರ್ಮಾನಿಸಿದ್ದು, ಯೋಜನೆ ಹಮ್ಮಿಕೊಂಡಿದ್ದಾರೆ. ಮರಗಳ ನಾಶ ಪರಿಸರಕ್ಕೆ ಹೆಚ್ಚಿನ ಹಾನಿ ತಂದೊಡ್ಡಲಿದ್ದು, ಇದು ಅಧಿಕಾರಿ ವರ್ಗಕ್ಕೆ ಮನದಟ್ಟಾಗದಿರುವು ವಿಪರ್ಯಾಸ ಎಂಬುದಾಗಿ ಪರಿಸರಪ್ರೇಮಿಗಳು ತಿಳಿಸುತ್ತಾರೆ.