HEALTH TIPS

ಕೇರಳದಲ್ಲಿ ಕೊರೊನಾ ಸೋಂಕಿತರೆಲ್ಲ ಗುಣಮುಖ: ವಿಶ್ವಕ್ಕೆ ಮಾದರಿಯಾದ ಭಾರತ

   
        ತಿರುವನಂತಪುರಂ, ಫೆಬ್ರವರಿ.24: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಣಾಂತಿಕ ಕೊರೊನಾ ವೈರಸ್ 33 ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಈ ಪೈಕಿ ಭಾರತವೂ ಕೂಡಾ ಒಂದಾಗಿತ್ತು. ಕೇರಳದಲ್ಲಿ ಒಂದೇ ವಾರದಲ್ಲಿ 3 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಇದೀಗ ಭಾರತವು ಕೊರೊನಾ ವೈರಸ್ ನಿಂದ ಮುಕ್ತವಾಗಿದೆ.
     ಕೇರಳದಲ್ಲಿ ಮೂವರು ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದ್ದು, ಮಾರಣಾಂತಿಕ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಇದರ ಜೊತೆಗೆ ಕೇರಳ ಸರ್ಕಾರವು ಸಾಂಕ್ರಾಮಿಕ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವಲ್ಲಿ ಯಶಸ್ಸು ಕಂಡಿದೆ. ಕೇರಳದಲ್ಲಿ ಮಾರಕ ಸೋಂಕು ನಿಯಂತ್ರಣಕ್ಕೆ ಬಂದಿದ್ದು ಹೇಗೆ. ಸೋಂಕಿತರಿಗೆ ನೀಡಿದ ಚಿಕಿತ್ಸಾ ವಿಧಾನ ಹೇಗಿತ್ತು. ಕೇರಳ ಸರ್ಕಾರವು ಸೋಂಕು ಹರಡದಂತೆ ಏನೆಲ್ಲ ಕ್ರಮಗಳನ್ನು ತೆಗೆದುಕೊಂಡಿತ್ತು ಎಂಬುದರ ಕುರಿತು ಸಂಪೂರ್ಣ ವರದಿ ಇಲ್ಲಿದೆ ನೋಡಿ.
              ರಾಜ್ಯದಲ್ಲೇ ಮೊದಲು ಮೂವರಿಗೆ ಕೊರಾನೊ ವೈರಸ್:
      ಭಾರತದಲ್ಲಿ ಮೊದಲಿಗೆ ಕೊರೊನಾ ವೈರಸ್ ಪತ್ತೆಯಾಗಿದ್ದೇ ಕೇರಳ ರಾಜ್ಯದಲ್ಲಿ. ಕಳೆದ ಜನವರಿ.24ರಂದು ಚೀನಾಗ ವುಹಾನ್ ನಗರದಿಂದ ಕೊಲ್ಕತ್ತಾ ಮಾರ್ಗವಾಗಿ ಕೇರಳದ ತ್ರಿಶೂರ್ ಗೆ ಆಗಮಿಸಿದ ವ್ಯಕ್ತಿಯಲ್ಲಿ ಮೊದಲು ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಅಲಪ್ಪುಜಾ ಎಂಬಲ್ಲಿ ಎರಡನೇ ಸೋಂಕಿತ ಪ್ರಕರಣ ಕಂಡು ಬಂದರೆ, ಕಾಸರಗೋಡ ಜಿಲ್ಲೆಯ ಕನ್ನಹಂಗಡ್ ನಲ್ಲಿ ಮೂರನೇ ಸೋಂಕಿತರ ಬಗ್ಗೆ ವರದಿಯಾಯಿತು.
     ವೈದ್ಯಕೀಯ ಪರೀಕ್ಷೆಗಾಗಿ 3,252 ಮಂದಿಗೆ ದಿಗ್ಬಂಧನ ಕಳೆದ ಫೆಬ್ರವರಿ.10ರ ಅಂಕಿ-ಅಂಶಗಳ ಪ್ರಕಾರ ಕೊರೊನಾ ವೈರಸ್ ಪೀಡಿತ ಪ್ರದೇಶಗಳಿಂದ ಕೇರಳಕ್ಕೆ ಆಗಮಿಸಿದ 3,218 ಜನರು ಸೇರಿದಂತೆ 3,252 ಮಂದಿಯನ್ನು ದಿಗ್ಬಂಧನದಲ್ಲಿ ಇರಿಸಲಾಗಿತ್ತು. ಈ ಪೈಕಿ 34 ಜನರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿನ ತುರ್ತು ನಿಗಾ ಘಟಕದಲ್ಲಿ ಇರಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
     45 ಮಂದಿ ಶಂಕಿತ ಸೋಂಕಿತರ ರಕ್ತದ ಮಾದರಿ ತಪಾಸಣೆ ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಹರಡಿರುವ ಅನುಮಾನದ ಹಿನ್ನೆಲೆಯಲ್ಲಿ 345 ಮಂದಿಯ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ರಾಷ್ಟ್ರೀಯ ಸೂಕ್ಷ್ಮ ರೋಗಾಣು ಅಧ್ಯಯನ ಕೇಂದ್ರಕ್ಕೆ ರವಾನೆ ಮಾಡಲಾಯಿತು. ಪ್ರಾಥಮಿಕ ಹಂತದಲ್ಲಿ 326 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದು ವರದಿ ಬಂದಿತು. ಚೀನಾದಲ್ಲಿ ಅತಿಹೆಚ್ಚು ಸೋಂಕಿತರು ಕಂಡು ಬಂದ ವುಹಾನ್ ನಗರದಿಂದಲೇ ಆಗಮಿಸಿದ 15 ಮಂದಿಯಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ 15 ಮಂದಿಯನ್ನು 28 ದಿನಗಳ ಕಾಲ ಗೃಹ ಬಂಧನದಲ್ಲೇ ಇರಿಸಿ ಚಿಕಿತ್ಸೆ ನೀಡಲಾಯಿತು.
       ಮೂವರು ಸೋಂಕಿತರ ಆರೋಗ್ಯದಲ್ಲಿ ಬಹುಪಾಲು ಚೇತರಿಕೆ:
      ಭಾರತದಲ್ಲೇ ಮೊದಲ ಸೋಂಕಿತ ಪ್ರಕರಣ ಕೇರಳದಲ್ಲೇ ಪತ್ತೆಯಾಗಿದ್ದು, ತದನಂತರ ಮೇಲಿಂದ ಮೇಲೆ ಮೂರೂ ಪ್ರಕರಣಗಳು ಬೆಳಕಿಗೆ ಬಂದವು. ಆದರೆ ನಂತರದಲ್ಲಿ ರಾಜ್ಯ ಸರ್ಕಾರವು ತೆಗೆದುಕೊಂಡ ಕ್ರಮ ಮತ್ತು ಸೋಂಕಿತರಿಗೆ ನೀಡಿದ ಸೂಕ್ತ ಚಿಕಿತ್ಸೆ ಬಳಿಕ ಮೂವರು ಸೋಂಕಿತರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿದೆ. ಮೊದಲ ಸೋಂಕಿತನನ್ನು ಮರುಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇಲ್ಲವೆಂದು ವರದಿ ಬಂದಿದೆ. ಉಳಿದ ಇಬ್ಬರು ಸೋಂಕಿತರು ಕೂಡಾ ಕೊರೊನಾ ವೈರಸ್ ನಿಂದ ಮುಕ್ತರಾಗಿದ್ದು, ಇಬ್ಬರ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡು ಬಂದಿದೆ. ಅಲ್ಲಿಂದ ಇದುವರೆಗೂ ಕೇರಳದಲ್ಲಿ ಯಾವುದೇ ಸೋಂಕಿತ ಪ್ರಕರಣಗಳು ಪತ್ತೆಯಾಗಿಲ್ಲ.
          018ರಲ್ಲಿ ಕಾಣಿಸಿಕೊಂಡಿದ್ದ ನಿಫಾ ವೈರಸ್ ನಿಂದ ಪಾಠ:
     ಕಳೆದ 2018ರ ಜುಲೈನಲ್ಲಿ ಕಾಣಿಸಿಕೊಂಡಿದ್ದ ನಿಫಾ ವೈರಸ್ ಕೇರಳ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. 17 ಮಂದಿಯ ಪ್ರಾಣವನ್ನು ಬಲಿ ತೆಗೆದುಕೊಂಡ ಮಾರಕ ರೋಗದಿಂದ ಅಂದು ಕೇರಳ ಸರ್ಕಾರವು ದೊಡ್ಡ ಪಾಠವನ್ನು ಕಲಿಯಿತು. ಆಗ ಕಲಿತ ಪಾಠದಿಂದಾಗಿ ಕೊರೊನಾ ವೈರಸ್ ನ್ನು ಯಶಸ್ವಿಯಾಗಿ ನಿಯಂತ್ರಿಸಲು ಸಾಧ್ಯವಾಯಿತು. ಈಗ ಮಾರಕ ಸೋಂಕಿನ ಬಗ್ಗೆ ಯಾರೂ ಕೂಡಾ ಆತಂಕ ಪಡುವ ಅಗತ್ಯವಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.
        ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಶಿಷ್ಟಾಚಾರ ಪಾಲಿಸಿದ ಕೇರಳ:
       ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಶಿಷ್ಟಾಚಾರವನ್ನು ಪಾಲನೆ ಮಾಡಲಾಯಿತು. ಸೋಂಕು ತಗಲಿರುವ ಬಗ್ಗೆ ಕೊಂಚ ಅನುಮಾನ ವ್ಯಕ್ತವಾದರೂ ಕೂಡಾ ಅಂಥವರನ್ನು ಗೃಹ ಬಂಧನದಲ್ಲಿ ಇರಿಸಲಾಗುತ್ತಿತ್ತು. ಮನೆಯಿಂದ ಹೊರ ಬಾರದಂತೆ ಸೂಚನೆ ನೀಡಲಾಗುತ್ತಿತ್ತು. ಹೀಗೆ ಗೃಹ ಬಂಧನದಲ್ಲಿ ಇರುವ ಶಂಕಿತ ಸೋಂಕಿತರ ಆರೋಗ್ಯ ತಪಾಸಣೆಗಾಗಿ 143 ಮಂದಿ ತಜ್ಞವೈದ್ಯರ ತಂಡವನ್ನು ರಚನೆ ಮಾಡಲಾಗಿತ್ತು. ಈ ತಂಡವು ದಿಗ್ಬಂಧನದಲ್ಲಿ ಇರುವ ಶಂಕಿತ ಸೋಂಕಿತರ ಆರೋಗ್ಯ ತಪಾಸಣೆ ನಡೆಸುತ್ತಿದ್ದರು.
        ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ತುರ್ತು ಘಟಕ:
    ರಾಜ್ಯದಲ್ಲಿ ಮೂರು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಕೇರಳ ಸರ್ಕಾರವು ಎಚ್ಚೆತ್ತುಕೊಂಡಿತು. ರಾಜ್ಯದ ಪ್ರತಿ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಕಾಲೇಜು ಮತ್ತು ಇತರೆ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವಂತಾ ತುರ್ತು ಘಟಕಗಳನ್ನು ಸ್ಥಾಪಿಸುವಂತೆ ಸೂಚನೆ ನೀಡಲಾಯಿತು. ಸೋಂಕಿನ ಗುಣಲಕ್ಷಣಗಳು ಕಂಡು ಬಂದವರನ್ನು 28 ದಿನಗಳ ಕಾಲ ಮನೆಯಿಂದ ಹೊರ ಬಾರದಂತೆ ಸರ್ಕಾರವು ಮನವಿ ಮಾಡಿಕೊಂಡಿತು. ರಾಜ್ಯದ ಜನರು ತೋರಿದ ಸಹನೆ ಮತ್ತು ನೀಡಿದ ಸಹಕಾರದಿಂದ ಸೋಂಕನ್ನು ತಡೆಗಟ್ಟುವಲ್ಲಿ ಸರ್ಕಾರ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
         ರಾಜ್ಯದ ಪ್ರತಿಜಿಲ್ಲೆಯಲ್ಲೂ ಸಹಾಯವಾಣಿ ಕೇಂದ್ರ ಶುರು:
      ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇರಳದ ಪ್ರತಿ ಜಿಲ್ಲೆಯಲ್ಲೂ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಯಿತು. ಪ್ರತಿ ಜಿಲ್ಲಾಕೇಂದ್ರಗಳೂ ಮುಖ್ಯ ಕಚೇರಿ ಜೊತೆಗೆ ನಿರಂತರ ಸಂಪರ್ಕವನ್ನು ಹೊಂದುವಂತೆ ಸೂಚನೆ ನೀಡಲಾಗಿತ್ತು. ಇನ್ನು, ಸಾರ್ವಜನಿಕರು ಕೊರೊನಾ ವೈರಸ್ ನಿಂದ ಆತಂಕಕ್ಕೆ ಒಳಗಾಗದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಯಿತು ಎಂದು ಕೇರಳ ಆರೋಗ್ಯ ಇಲಾಖೆಯ ಪ್ರಿನ್ಸಿಪಲ್ ಸೆಕ್ರಟರಿ ಡಾ.ರಾಜನ್ ಎನ್ ಖೋಬ್ರಗಡೆ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries