ಕಾಸರಗೋಡು: ಕಾಸರಗೋಡು ಕಸಬ ಕರಾವಳಿಯ 60ವರ್ಷದ ಸರೋಜಿನಿ ಅಮ್ಮ ಅವರಿಗೆ ಇನ್ನು ಸಮಾಧಾನದಿಂದ ಬದುಕು ಸಾಗಸಬಹುದು. 4 ವರ್ಷಗಳ ಹಿಂದೆ ಮೀನು ವ್ಯಾಪಾರ್ಕಾಗಿ ಸಾಲ ಪಡೆದ 10 ಸಾವಿರ ರೂ.ವನ್ನು 250 ರೂ. ಪಾವತಿಸಿ ತೀರ್ಪು ನೀಡಲಾಗಿದೆ.
ಜಿಲ್ಲೆಯ ಸಿಂಡಿಕೆಟ್ ಬ್ಯಾಂಕ್ ಶಾಖೆಗಳಿಂದ ಸಾಲ ಪಡೆದು ಮರಳಿ ಪಾವತಿಸಲಾಗದೆ ಜಪ್ತಿ ಸಹಿತ ಕ್ರಮ ಎದುರಿಸುತ್ತಿರುವ ಮಂದಿಗಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಸಲಾದ ಕಂದಾಯ ಅದಾಲತ್ ನಲ್ಲಿ ಸರೋಜಿನಿ ಅಮ್ಮ ಅವರಿಗೆ ಈ ಸೌಲಭ್ಯ ದೊರೆತಿದೆ.
ಸಿಂಡಿಕೆಟ್ ಬ್ಯಾಂಕ್ ನ ಕಾಸರಗೋಡು ಶಾಖೆಯಿಂದ 4 ವರ್ಷಗಳಹಿಂದೆ ಅವರು 10 ಸಾವಿರ ರೂ. ಸಾಲ ಪಡೆದಿದ್ದರು. ಆದರೆ ಪುತ್ರ ರಮೇಶ್ ಅವರಿಗೆ ಗಂಭೀರ ಸ್ವರೂಪದ ಸೋಂಟನೋವು ತಗುಲಿಕೊಂಡ ಮತ್ತು ಪುತ್ರಿ ಸುಲೇಖಾ ಅವರು ವಾತರೋಗದಿಂದ ಬಳಲುತ್ತಿರುವ ಕಾರಣಗಳಿಂದ ವ್ಯಾಪಾರವನ್ನು ಮೊಟಕುಗೊಳಿಸಬೇಕಾಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಅನುಭವಿಸಬೇಕಾಗ ಬಂದಿದ್ದು, 2 ವರ್ಷ ಹಿಂದಿನ ವರೆಗೆ ಮರುಪಾವತಿ ನಡೆಸುತ್ತಿದ್ದವರಿಗೆ ನಂತರ ಸಾಧ್ಯವಾಗಿರಲಿಲ್ಲ. ಮರುಪಾವತಿಗೆ ಬ್ಯಾಂಕ್ ಅಧಿಕಾರಿಗಳು ಹೆಚ್ಚುವರಿ ಸಮಯಾವಕಾಶ ನೀಡಿದ್ದರೂ, ಆಗಲೂ ಮರುಪಾವತಿಗೆ ಗತ್ಯಂತರವಿಲ್ಲದೇ ಹೋಗಿತ್ತು. ಇವರ ಅರ್ಜಿಯನ್ನು ಅದಾಲತ್ ನಲ್ಲಿ ಪರಿಶೀಲಿಸಲಾಗಿದ್ದು, 2 ದಿನಗಳ ಅವಧಿಯಲ್ಲಿ 250 ರೂ. ಪಾವತಿಸುವಂತೆ ತೀರ್ಪು ನೀಡಲಾಗಿದೆ.