HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ:34-ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

                                    ಇಂದಿನ ಮೂರು ಟಿಪ್ಪಣಿಗಳು ಇಲ್ಲಿವೆ. 

೧. ವಿಜಯ ಕರ್ನಾಟಕ ಕೊಂದ ಕನ್ನಡ

ಎರಡು ವರ್ಷಗಳ ಹಿಂದೆ ‘ಸ್ವಚ್ಛ ಭಾಷೆ ಕಲಿಕೆ ಅಭಿಯಾನ’ ಆರಂಭವಾದಾಗಿನಿಂದ ಅನೇಕ ಜನ ಆಸಕ್ತ ಸಹಪಾಠಿಗಳು ಇದರಲ್ಲಿ ಕೈಜೋಡಿಸಿದ್ದಾರೆ. ಶಿಷ್ಟ ಬರವಣಿಗೆಯಲ್ಲಿ ಭಾಷೆ ಹೇಗೆ ಸ್ವಚ್ಛವಾಗಿರಬೇಕು ಎಂದು ಕಲಿತುಕೊಳ್ಳುವುದಷ್ಟೇ ಅಲ್ಲದೆ ಎಲ್ಲೆಲ್ಲಿ (ಪತ್ರಿಕೆಗಳಲ್ಲಿ, ಫಲಕಗಳಲ್ಲಿ, ಟಿವಿ/ರೇಡಿಯೊಗಳಲ್ಲಿ...) ತಪ್ಪುಗಳು ಕಂಡುಬಂದಿವೆಯೋ ಅವುಗಳನ್ನು ಗಮನಕ್ಕೆ ತಂದುಕೊಂಡು ಕಲಿಕೆಗೆ ಸೇರಿಸಲು ನೆರವಾಗಿದ್ದಾರೆ. ಅತ್ಯಲ್ಪ ಪ್ರಮಾಣದಲ್ಲೇ ಇರಬಹುದು, ಆದರೆ ಈ ಬಗ್ಗೆ ಒಂದು ರೀತಿಯಲ್ಲಿ ಜನಜಾಗೃತಿ ಹೆಚ್ಚುತ್ತಿದೆ ಎನ್ನುವುದು ಸಂತಸದ ಸಂಗತಿ. ಮೊನ್ನೆ ೨ಮಾರ್ಚ್೨೦೨೦ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಕಂಡುಬಂದ ಒಂದು ಅಸಂಬದ್ಧ ಶೀರ್ಷಿಕೆಯನ್ನು ಒಬ್ಬರಲ್ಲ ಇಬ್ಬರಲ್ಲ ಒಟ್ಟು ಐದು ಮಂದಿ ಪ್ರತ್ಯೇಕವಾಗಿ ಬರೆದು ತಿಳಿಸಿದ್ದಾರೆ! ಅಂದರೆ, ಐದುಸಾವಿರ ಜನರಾದರೂ ಆ ತಪ್ಪನ್ನು ಗಮನಿಸಿರುತ್ತಾರೆ ಅಂತ ಅರ್ಥ. (ಓದುಗರ ಸ್ಪಂದನ ಅನುಪಾತದ ಬಗ್ಗೆ ಪತ್ರಿಕೆಗಳದೊಂದು ಗೋಲ್ಡನ್ ರೂಲ್ ಇದೆ- ಬರಿ ತಪ್ಪು ಒಪ್ಪು ಅಂತಲ್ಲ, ಮೆಚ್ಚುಗೆಯನ್ನು ಸೂಚಿಸಲಿಕ್ಕೆ ಕೂಡ- ಒಬ್ಬ ಓದುಗ ಪತ್ರ ಬರೆದಿದ್ದಾನೆಂದರೆ ಕನಿಷ್ಠ ೧೦೦೦ ಓದುಗರು ಆ ರೀತಿ ಬರೆದುತಿಳಿಸಬೇಕು ಎಂದುಕೊಂಡಿರುತ್ತಾರೆ, ಬರೆದಿರುವುದಿಲ್ಲ ಅಷ್ಟೇ).

ವಿಜಯಕರ್ನಾಟಕ ಪತ್ರಿಕೆಯಲ್ಲಿ ಬಂದ ಅಸಂಬದ್ಧ ಶೀರ್ಷಿಕೆ: “ಮಗು ಕೊಂದ ಚಿರತೆ ಬೇಟೆಗೆ ಸಜ್ಜು" [ಗಮನಿಸಿ ತಿಳಿಸಿದವರು: ಶಶಿಕಲಾ ಶಿವಮೊಗ್ಗ, ಅರ್ಪಣಾ ಕುಂದಾಪುರ, ಶ್ರೀವಲ್ಲಿ ಮಂಜುನಾಥ, ಸೌಮ್ಯಾ ಬೆಂಗಳೂರು, ಮತ್ತು ಫ್ಲೋರಿಡಾದಿಂದ ನಾಗೇಶ ರಾವ್]. ಈ ಶೀರ್ಷಿಕೆ ಏಕೆ/ಹೇಗೆ ಅಸಂಬದ್ಧ? ಒಮ್ಮೆ ಆಲೋಚಿಸಿ: ಮಗುವು ಚಿರತೆಯನ್ನು ಕೊಂದ ಮೇಲೆ ಆ ಚಿರತೆ ಬೇಟೆಗೆ ಸಜ್ಜಾಗುವುದು ಹೇಗೆ? ಅಥವಾ ಅದು ಒಂದುವೇಳೆ ‘ಮಗುವನ್ನು ಕೊಂದ ಚಿರತೆ...’ ಅಂತಿದ್ದರೂ ಅನಂತರದ ಭಾಗ ನಿರ್ದಿಷ್ಟವಾದ ನಿಖರವಾದ ಒಂದೇ ಅರ್ಥವನ್ನು ಕೊಡುವುದಿಲ್ಲ. ಆಶ್ಚರ್ಯವೆಂದರೆ ವಿಜಯಕರ್ನಾಟಕ ಪತ್ರಿಕೆಯ ಅದೇ ಸಂಚಿಕೆಯ ಮುಖಪುಟದಲ್ಲಿ “ನರಹಂತಕ ಚಿರತೆ ಬೇಟೆಗೆ ಆರ್ಡರ್" ಎಂಬ ಶೀರ್ಷಿಕೆ ಸರಿಯಾಗಿಯೇ ಇದೆ. ಸಂಪಾದಕೀಯದಲ್ಲಿ “ಚಿರತೆಗೆ ಮಗು ಬಲಿ" ಎಂದು ಬರೆದದ್ದು ಸರಿಯೇ ಇದೆ. ಹಾಗಿದ್ದರೆ “ಮಗು ಕೊಂದ ಚಿರತೆ..." ಎಂಬ ಅಸಂಬದ್ಧತೆ ಏಕೆ ನುಸುಳಿತು? 

ಇದು, ಕನ್ನಡ ಪತ್ರಿಕೆಗಳ ಇತ್ತೀಚೆಗಿನ (ಸುಮಾರು ೮-೧೦ ವರ್ಷಗಳಿಂದೀಚೆಗಿನ) ‘ಕರ್ಮ’ಕಾಂಡ. ಕರ್ಮಪದದ ಚಿಗುರನ್ನಲ್ಲ ಕಾಂಡವನ್ನೇ ಹೊಸಕಿ ಹಾಕುವ ಹೀನ ಕೃತ್ಯ. ವಿಜಯಕರ್ನಾಟಕ ಒಂದೇ ಅಲ್ಲ, ಬೇರೆ ಪತ್ರಿಕೆಗಳೂ ಹೀಗೆಯೇ. “ಅಜ್ಜಿ ಕೊಂದ ಆನೆ", “ಗಾಂಧಿ ಬೈದ ಭೈರಪ್ಪ", “ರಶ್ದಿ ಹೊಗಳಿದ್ದಕ್ಕೆ ಹಲ್ಲೆ", “ಮಹಿಳೆ ತಬ್ಬಿಕೊಳ್ಳಲು ಯತ್ನಿಸಿದ ಚಾಲಕ", “ದೀದಿ ಬಂಧಿಸಿದರೆ ಬಂಗಾಳಕ್ಕೆ ಬೆಂಕಿ", “ರಿಕ್ಕಿ ಕೇಜ್ ಅಭಿನಂದಿಸಿದ ಮುಖ್ಯಮಂತ್ರಿ", “ಫೆಡೆರರ್ ಮಣಿಸಿದ ಜೋಕೊ ಫೈನಲ್‌ಗೆ" - ಹೀಗಿರುತ್ತವೆ ಈಗಿನ ಶೀರ್ಷಿಕೆಗಳು. ಈ ಎಲ್ಲದರಲ್ಲೂ ಮೊದಲ ಪದಕ್ಕೆ ದ್ವಿತೀಯಾ ವಿಭಕ್ತಿಪ್ರತ್ಯಯ ‘ಅನ್ನು’ ಸೇರಬೇಕಾಗಿರುತ್ತದೆ. ಏಕೆಂದರೆ ಅವು ಕರ್ಮಪದಗಳು. ದ್ವಿತೀಯಾ ವಿಭಕ್ತಿಪ್ರತ್ಯಯ ಸೇರಿಸದೆ ಹಾಗೇ ಬಿಟ್ಟರೆ ಪ್ರಥಮಾವಿಭಕ್ತಿ ಎಂದಾಗುವುದರಿಂದ ಅವು ಕರ್ತೃಪದ ಎನಿಸುತ್ತವೆ. ಸುದ್ದಿವಿವರ ಮತ್ತು ಶೀರ್ಷಿಕೆ ಒಂದಕ್ಕೊಂದು ವಿರುದ್ಧ. “ಶೀರ್ಷಿಕೆಯಲ್ಲಿ ವಿಭಕ್ತಿಪ್ರತ್ಯಯ ಅಗತ್ಯವಿಲ್ಲ" ಎಂದು ಯಾರೋ ಆರಂಭಿಸಿದ ಕುರುಡುಸಿದ್ಧಾಂತವನ್ನು ಅಂಧಾನುಕರಣೆ ಮಾಡುತ್ತಿರುವ ಈಗಿನ ಪತ್ರಕರ್ತರಿಂದಾಗಿ ಪ್ರತಿದಿನವೂ ಏನಾದರೊಂದು ಅಸಂಬದ್ಧ. ಶೀರ್ಷಿಕೆಯಲ್ಲಿ ಜಾಸ್ತಿ ಅಕ್ಷರ ಬಳಸಲಿಕ್ಕಾಗದು, ಹಾಗಾಗಿ ‘ಅನ್ನು’, ‘ಇಂದ’ ಮುಂತಾಗಿ ವ್ಯಾಕರಣಬದ್ಧತೆಯನ್ನು ಕೈಬಿಡುತ್ತೇವೆ ಎಂದು ಸುದ್ದಿಮನೆಯವರ ಸಮಜಾಯಿಶಿ. ಒಪ್ಪಿಕೊಳ್ಳೋಣ. ವ್ಯಾಕರಣಬದ್ಧತೆ ಬೇಕಾಗಿಲ್ಲ. ಆದರೆ ಶೀರ್ಷಿಕೆ ಇರುವುದು ಸುದ್ದಿಯನ್ನು ಸಂಕ್ಷಿಪ್ತವಾಗಿ ತಿಳಿಸುವುದಕ್ಕೆ. ಸಂಕ್ಷಿಪ್ತತೆಯ ಜೊತೆಗೆ ೧೦೦% ನಿಖರತೆ ಬೇಕು. ಒಂದು ವಾಕ್ಯಕ್ಕೆ ನಿರ್ದಿಷ್ಟವಾದ ಒಂದೇ ಅರ್ಥ ಇರಬೇಕು. ಸುದ್ದಿವಿವರದಲ್ಲಿ ಇರುವುದಕ್ಕೆ ಪೂರ್ಣ ವಿರೋಧಾರ್ಥದ ಶೀರ್ಷಿಕೆಯಿದ್ದರೆ ಪ್ರಯೋಜನವೇನು?

ವಾಕ್ಯದ ಅರ್ಥ ಬದಲಾಗದಿದ್ದರೆ ವಿಭಕ್ತಿಪ್ರತ್ಯಯ ಬಿಟ್ಟುಬಿಡಬಹುದು ನಿಜ. ‘ಇಂಗು ತಿಂದ ಮಂಗ’ ಎನ್ನುವಲ್ಲಿ ‘ಇಂಗನ್ನು ತಿಂದ ಮಂಗ’ ಎನ್ನಬೇಕಾಗಿಲ್ಲ. ‘ಹಾಲು ಕುಡಿದ ಬೆಕ್ಕು’ ಎನ್ನುವಲ್ಲಿ “ಹಾಲನ್ನು ಕುಡಿದ ಬೆಕ್ಕು" ಎನ್ನಬೇಕಾಗಿಲ್ಲ. ‘ಬೆಕ್ಕು ಹಾಲು ಕುಡಿಯಿತು" ಮತ್ತು "ಹಾಲು ಕುಡಿದ ಬೆಕ್ಕು" ಈ ವಾಕ್ಯಗಳಲ್ಲಿ ಹಾಲು ನಿರ್ಜೀವ ಪದಾರ್ಥ. ‘ಹಾಲನ್ನು’ ಎನ್ನಬೇಕಾಗಿಲ್ಲ. ಸಜೀವಿಗಳಿಗಾದರೆ ‘ಅನ್ನು’ ಪ್ರತ್ಯಯವನ್ನು ಬಳಸಲೇಬೇಕಾಗುತ್ತದೆ. ‘ಅಮ್ಮ ಮಗಳು ಕರೆದಳು’ ಎಂದರೆ ವಾಕ್ಯ ತಪ್ಪಾಗುತ್ತದೆ. ಒಂದೋ ‘ಅಮ್ಮ ಮಗಳನ್ನು ಕರೆದಳು’, ಇಲ್ಲವೇ ‘ಅಮ್ಮನನ್ನು ಮಗಳು ಕರೆದಳು.’ ಅಂತೂ ವಿಭಕ್ತಿಪ್ರತ್ಯಯ ಬಳಸಿ ಬರೆಯಬೇಕಾಗುತ್ತದೆ. ‘ವೃದ್ಧೆಯನ್ನು ಕೊಂದು ಪರಾರಿ’ ಎನ್ನಬೇಕಾದಲ್ಲಿ ‘ವೃದ್ಧೆ ಕೊಂದು ಪರಾರಿ’ ಎಂದರೆ ವೃದ್ಧೆಯೇ ಯಾರನ್ನೋ ಕೊಂದು ಪರಾರಿಯಾದಳೇನೋ ಎಂದು ಅನರ್ಥವಾಗುತ್ತದೆ. ‘ಬಾಳೆಹಣ್ಣು ತಿಂದ ಹುಡುಗ’ ಎಂಬ ವಾಕ್ಯದಲ್ಲಿ ವಿಭಕ್ತಿಪ್ರತ್ಯಯ ಇಲ್ಲದಿದ್ದರೂ ಅರ್ಥವಾಗುತ್ತದೆ. ಗೊಂದಲವಿಲ್ಲ. ಬಾಳೆಹಣ್ಣು ಹುಡುಗನನ್ನು ತಿನ್ನುವುದು ಅಸಾಧ್ಯ. ‘ಬಾಳೆಹಣ್ಣು’ ಪ್ರಥಮಾವಿಭಕ್ತಿಯಂತೆ ಕಂಡರೂ ಅದು ಕರ್ತೃಪದ ಅಲ್ಲ, ಕರ್ಮಪದ. ಆದರೆ ‘ಮಹಿಳೆ ಕೊಂದ ಹುಲಿ’ ವಾಕ್ಯದಿಂದ ಗೊಂದಲವಾಗುವ ಸಾಧ್ಯತೆಯಿದೆ. ಏಕೆಂದರೆ ಹುಲಿ ಮಹಿಳೆಯನ್ನು ಕೊಲ್ಲಬಹುದು; ಮಹಿಳೆ ಹುಲಿಯನ್ನು ಕೊಲ್ಲಬಹುದು (ಹೊಯ್ಸಳ ವಂಶದವಳಾದರೆ ಖಂಡಿತ ಕೊಲ್ಲಬಹುದು!) ಗೊಂದಲಕ್ಕೆ ಅವಕಾಶವೀಯದೆ ‘ಮಹಿಳೆಯನ್ನು ಕೊಂದ ಹುಲಿ’ ಎಂದು ಬರೆಯುವುದು ಸೂಕ್ತ. ಇದರ ಮಾರ್ಗದರ್ಶಿ ಸೂತ್ರ ಸುಲಭವಾಗಿಯೇ ಇದೆ. ಸಕರ್ಮಕ ಕ್ರಿಯೆಯನ್ನು ಸೂಚಿಸುವ ವಾಕ್ಯದಲ್ಲಿ ಎರಡೂ ನಾಮಪದಗಳು ಸಜೀವ ಮತ್ತು ಚಲಿಸಬಲ್ಲವುಗಳಾಗಿದ್ದರೆ ಕರ್ಮಸೂಚಕ ವಿಭಕ್ತಿಪ್ರತ್ಯಯ ಬೇಕೇಬೇಕು. ಹುಲಿ ಮತ್ತು ಮಹಿಳೆ- ಎರಡೂ ಸಜೀವಿಗಳು, ಚಲಿಸಬಲ್ಲವು, ಹಾಗಾಗಿ ಯಾರು ಯಾರನ್ನು ಕೊಂದದ್ದು ಎಂದು ಸ್ಪಷ್ಟವಾಗಿ ತಿಳಿಸಲು ವಿಭಕ್ತಿಪ್ರತ್ಯಯ ಬೇಕು. ಒಂದು ನಾಮಪದ ಮಾತ್ರ ಸಜೀವಿಯದಾಗಿದ್ದರೆ (ಉದಾ: ಬೆಣ್ಣೆ ತಿಂದ ಬಾಲಕೃಷ್ಣ; ಕಥೆ ಹೇಳಿದ ಯಶೋದೆ) ಅಲ್ಲಿ ಪ್ರತ್ಯಯ ಬೇಕಾಗಿಲ್ಲ. ಎರಡೂ ನಾಮಪದಗಳು ನಿರ್ಜೀವ ವಸ್ತುಗಳದಾಗಿದ್ದರೂ ಬೇಕಾಗಿಲ್ಲ (ಉದಾ: ತುಕ್ಕು ಹಿಡಿದ ಪಾತ್ರೆ; ಪರಿಮಳ ಬೀರಿದ ಊದಿನಕಡ್ಡಿ). 

ಕನ್ನಡದಲ್ಲಿ ನಾವು ವಾಕ್ಯಗಳನ್ನು ಎಡದಿಂದ ಬಲಕ್ಕೆ ಒಂದೊಂದೇ ಪದದ ರೀತಿಯಲ್ಲಿ ಓದುತ್ತೇವೆ. ಒಂದು ಪದ ಓದಿದ ಕೂಡಲೇ ನಮ್ಮ ಮಿದುಳು ಅದನ್ನು ಸಂಸ್ಕರಿಸುತ್ತದೆ, ಮುಂದಿನ ಪದ ಯಾವುದಿರಬಹುದೆಂದು  ನಿರೀಕ್ಷಿಸುತ್ತದೆ. ಮುಂದಿನ ಪದ ಸಿಕ್ಕಿದಾಗ ಅದನ್ನೂ ಸಂಸ್ಕರಿಸಿ ವಾಕ್ಯ ಕಟ್ಟುವ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ. ಇದೆಲ್ಲ ಮೈಕ್ರೋಸೆಕೆಂಡುಗಳಲ್ಲಿ ಕಂಪ್ಯೂಟರ್ ಚಿಪ್ ಕಾರ್ಯವೆಸಗಿದಂತೆ ನಡೆದುಹೋಗುತ್ತದೆ. ‘ಮಗು ಕೊಂದ ಚಿರತೆ’ ಎಂಬ ವಾಕ್ಯದಲ್ಲಿ ಮೊದಲ ಪದ ‘ಮಗು’ಗೆ ಯಾವ ವಿಭಕ್ತಿಪ್ರತ್ಯಯವೂ ಇಲ್ಲದಿರುವುದನ್ನು ಗಮನಿಸುವ ಮಿದುಳು ಅದನ್ನು ಪ್ರಥಮಾವಿಭಕ್ತಿ ಎಂದೇ ಪರಿಗಣಿಸುತ್ತದೆ. ಕರ್ತೃಪದ ಇರಬಹುದೆಂದು ಭಾವಿಸುತ್ತದೆ. ಎರಡನೇ ಪದ ‘ಕೊಂದ’ ಎದುರಾದಾಗ “ಮಗು ಯಾರನ್ನೋ ಫಿನಿಷ್ ಮಾಡಿರಬೇಕು" ಎಂದು ಅಚ್ಚರಿಗೊಳ್ಳುತ್ತದೆ. ಚಿರತೆ ಎಂಬ ಮೂರನೇ ಪದ ಬಂದಾಗ ‘ಮಗು ಚಿರತೆಯನ್ನು ಕೊಂದಿತು’ ಎಂದು ಕರ್ತೃ-ಕರ್ಮ-ಕ್ರಿಯಾ ಸಂರಚನೆಗೆ ಹೊಂದಿಸಿಕೊಳ್ಳುತ್ತದೆ, ಹಾಗೆಯೇ ಅರ್ಥಮಾಡಿಕೊಳ್ಳುತ್ತದೆ. ಒಂದುವೇಳೆ ‘ಮಗುವನ್ನು ಕೊಂದ ಚಿರತೆ’ ಅಂತಿರುತ್ತಿದ್ದರೆ, ಮೊದಲ ಪದದಲ್ಲೇ ಮಿದುಳಿಗೆ ಗೊತ್ತಾಗಿಬಿಡುತ್ತದೆ ಮಗುವನ್ನು ಯಾರೋ ಏನೋ ಮಾಡಿದ್ರು ಅಂತ. ಮಿಕ್ಕಿದ್ದೆಲ್ಲ ಸಲೀಸು.    

ಇಷ್ಟು ಸ್ಪಷ್ಟವಾದ ಮೇಲೂ ಪತ್ರಕರ್ತರು ‘ಮಗು ಕೊಂದ ಚಿರತೆ’ ಎಂದು ಬರೆದರೆ ‘ಕಂಡಲ್ಲಿ ಗುಂಡಿಕ್ಕಬೇಕಾದ್ದು’ ಚಿರತೆಗಲ್ಲ, ಈ ರೀತಿ ಬೇಜವಾಬ್ದಾರಿಯಿಂದ ಕನ್ನಡವನ್ನು ಕೊಲ್ಲುವ ಪತ್ರಕರ್ತರಿಗೆ! (ಬೇಜಾರಾಗುತ್ತದೆ, ಆದರೆ ಪದೇ ಪದೇ ಅದೇ ತಪ್ಪು ಮಾಡುತ್ತಾರೆಂದರೆ ಹಾಗೆನ್ನದೆ ವಿಧಿಯಿಲ್ಲ). ಈ ಟಿಪ್ಪಣಿಯ ತಲೆಬರಹದಿಂದ ವಿಜಯಕರ್ನಾಟಕ ಪತ್ರಿಕೆಯಲ್ಲಿರುವವರು ವ್ಯಗ್ರರಾಗಬೇಕಿಲ್ಲ. ಏಕೆಂದರೆ ಅವರ ಪ್ರಕಾರ ಈ ತಲೆಬರಹದಲ್ಲಿ ಮೊದಲ ಪದ ಕರ್ಮಪದ! :-) 

===
೨. ಖಾನೇಶುಮಾರಿ ಎಂದರೆ ಜನಗಣತಿ ಅಲ್ಲ!

ಇಂಗ್ಲಿಷ್‌ನಲ್ಲಿ Census ಎಂದು ಇರುವುದನ್ನು ಕನ್ನಡದಲ್ಲಿ ಜನಗಣತಿ ಎನ್ನುತ್ತೇವಷ್ಟೆ? ಇದನ್ನೇ ಕೆಲ ವರ್ಷಗಳ ಹಿಂದಿನವರೆಗೂ ‘ಖಾನೇಶುಮಾರಿ’ ಎನ್ನುವುದಿತ್ತು. ಖಾನೇಶುಮಾರಿ ಪಾರಸೀಕ ಪದ. ಅದರ ನಿಜವಾದ ಅರ್ಥ ಜನರ ಗಣನೆ ಅಲ್ಲ, ಮನೆಗಳ ಅಂದಾಜು ಲೆಕ್ಕ ಎಂದು ಅರ್ಥ. (ಖಾನಃ = ಮನೆ; ಶುಮಾರ್ = ಅಂದಾಜು). ಜನರ ಗಣನೆಯ ವಿಚಾರವನ್ನು ೨೩ ಶತಮಾನಗಳ ಹಿಂದೆ ಚಾಣಕ್ಯನು ಹೇಳಿದ್ದರೂ ಮನೆಗಳ ಮೇಲೆ ತೆರಿಗೆ ಹಾಕುವುದು ಅದಕ್ಕಿಂತಲೂ ಹಿಂದಿನಿಂದಲೇ ರಾಜಾದಾಯದ ಮೂಲವಾಗಿತ್ತು. ಕನ್ನಡ ಶಾಸನಗಳಲ್ಲಿ ಇದಕ್ಕೆ ಮನೆದೆರೆ ( = ಮನೆ ತೆರಿಗೆ) ಎಂಬ ಹೆಸರಿದೆ. ಈಗ ಈ ಮನೆದೆರೆ ನಗರಸಭೆ, ಪಂಚಾಯಿತಿಗಳ ಅಧಿಕಾರ ವ್ಯಾಪ್ತಿಯೊಳಗೆ ಬಂದಿದೆ ಅಷ್ಟೇ ಹೊರತು, ಅದರಲ್ಲಿ ಹೊಸದೇನೂ ಇಲ್ಲ. ತೆರಿಗೆ ಹಾಕುವುದರಲ್ಲಿ ಹಿಂದಿನವರು ಇಂದಿನ ಸರಕಾರಗಳಿಗಿಂತ ಒಂದಡಿ ಮುಂದಿದ್ದರೇ ಹೊರತು ಹಿಂದಿರಲಿಲ್ಲ! [ಪಾವೆಂ ಆಚಾರ್ಯರ ‘ಪದಾರ್ಥ ಚಿಂತಾಮಣಿ’ ಗ್ರಂಥದಿಂದ ಆಯ್ದ ಭಾಗ].

===
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು

ಅ) ಸ್ವಾರ್ಜಿತ ಸರಿ. ಸ್ವ + ಅರ್ಜಿತ = ಸ್ವಾರ್ಜಿತ. ಸವರ್ಣದೀರ್ಘ ಸಂಧಿ. ತಾನೇ ಸಂಪಾದಿಸಿದ ಎಂದು ಅರ್ಥ. ಆಸ್ತಿಗಳ ನೋಂದಣಿ ಪತ್ರಗಳಲ್ಲಿ ‘ಸ್ವಯಾರ್ಜಿತ’ ಎಂಬ ಪದವನ್ನು ಸಾಮಾನ್ಯವಾಗಿ ಬಳಸುತ್ತಾರೆ. ಪತ್ರಿಕೆಗಳೂ ಹಾಗೆಯೇ ತಪ್ಪಾಗಿ ಬರೆಯುತ್ತವೆ. ಮಗಳು ಜಾನಕಿ ಧಾರಾವಾಹಿಯ ‘ವಕೀಲ’ ಟಿ.ಎನ್.ಸೀತಾರಾಮ್ ಸಹ ನ್ಯಾಯಾಲಯ ದೃಶ್ಯಗಳಲ್ಲಿ ‘ಸ್ವಯಾರ್ಜಿತ’ ಎಂಬ ತಪ್ಪು ಪದಪ್ರಯೋಗ ಮಾಡುತ್ತಾರೆ.

ಆ) ಅತಿರೇಕ ಸರಿ. ಅತಿಶಯ, ಆಧಿಕ್ಯ ಎಂಬ ಅರ್ಥ. ಬಹಳಷ್ಟು ಜನರು ಮಹಾಪ್ರಾಣ ಖ ಬಳಸಿ ‘ಅತಿರೇಖ’ ಎಂದು ತಪ್ಪಾಗಿ ಬರೆಯುತ್ತಾರೆ.

ಇ) ಆಗಂತುಕ ಸರಿ. ಅಕಸ್ಮಾತ್ತಾಗಿ ಬಂದಿರುವ, ಅಪರಿಚಿತ, ಅತಿಥಿ ಎಂಬ ಅರ್ಥ. ಇದನ್ನು ‘ಆಗುಂತಕ’, ‘ಆಗುಂತುಕ’ ಅಂತೆಲ್ಲ ಬರೆದರೆ ತಪ್ಪು.

ಈ) ಸಾಂತ್ವನ ಸರಿ. ಸಮಾಧಾನಪಡಿಸುವುದು, ಹಿತವಚನ ಎಂದು ಅರ್ಥ. ಈ ಪದ ‘ಸಾಂತ್ವಾನ’ ಎಂದು ಪತ್ರಿಕೆಗಳಲ್ಲೂ ತಪ್ಪಾಗಿ ಕಾಣಿಸಿಕೊಳ್ಳುತ್ತದೆ.

ಉ) ಮೇದಸ್ ಸರಿ. ಕೊಬ್ಬು, ಮಾಂಸದಿಂದ ಉಂಟಾದ ಧಾತು ಎಂದರ್ಥ. ಕೊಬ್ಬು ಜಾಸ್ತಿಯಾಯ್ತೆಂದು ಮಹಾಪ್ರಾಣ ಬಳಸಿ ಮೇಧಸ್ಸು ಎಂದು ಬರೆದರೆ ತಪ್ಪು.

ಬರಹ:ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries