ಕುಂಬಳೆ: ವಿಶ್ವಬ್ರಾಹ್ಮಣ ಸಮಾಜದ ಕಾರ್ಳೆ ಶ್ರೀಕಾಳಿಕಾಂಬ ದೇವಸ್ಥಾನದಲ್ಲಿ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಕ್ಷೇತ್ರದ ಪ್ರಧಾನ ಆಚಾರ್ಯರಾದ ಬ್ರಹ್ಮಶ್ರೀ ಪುರೋಹಿತ ಕೆ.ರಾಮಕೃಷ್ಣ ಆಚಾರ್ಯರ ಆಚಾರ್ಯತ್ವದಲ್ಲಿ ಮಾ.5ರಿಂದ 12ರ ತನಕ ವಿವಿಧ ವೈದಿಕ, ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮ ಕಲಶೋತ್ಸವ ವೈಭವಯುತವಾಗಿ ನಡೆಸಲಾಗುವುದು ಎಂದು ಕ್ಷೇತ್ರ. ಸಮಿತಿ ಅಧ್ಯಕ್ಷ ಪಿ.ಹರೀಶ್ಚಂದ್ರ ಆಚಾರ್ಯ ಬೇಕೂರು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ರಹ್ಮಕಲಶೋತ್ಸವದಂಗವಾಗಿ ದೇವಸ್ಥಾನದಲ್ಲಿ ಜರಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗಣಪತಿ ಗುಡಿ,ಕಾಳಭೈರವ ಸನ್ನಿಧಿಯ ನವೀಕರಣದ ಜತೆಗೆ ಗುರುಧ್ಯಾನ ಮಂದಿರದ ಬದಲಾವಣೆ,ದೇವಸ್ಥಾನದ ಮುಂಭಾದಲ್ಲಿ ಕೇರಳ ಶೈಲಿಯ ದ್ವಾರ ನಿರ್ಮಾಣ, ಕ್ಷೇತ್ರ ಪರಿಸರದಲ್ಲಿ ಅಡುಗೆ ಶಾಲೆ ಅಭಿವೃದ್ಧಿ ಮೊದಲಾದ ಹಲವಾರು ಅಭಿವೃದ್ಧಿ ಕಾರ್ಯವನ್ನು ನಡೆಸಲಾಗಿದೆ ಎಂದರು.
ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಕೆ.ವಾಸುದೇವ ಆಚಾರ್ಯ ಕುಂಬಳೆ ಮಾತನಾಡುತ್ತಾ ಮಾ.5ಕ್ಕೆ ಪ್ರಧಾನ ಆಚಾರ್ಯರ ಆಗಮನದೊಂದಿಗೆ ಕ್ಷೇತ್ರದಲ್ಲಿ ವಿವಿಧ ವೈದಿಕ ತಾಂತ್ರಿಕ ಕಾರ್ಯ ಆರಂಭವಾಗಲಿದ್ದು ಅಂದು ಮಧ್ಯಾಹ್ನ 3ಗಂಟೆಗೆ ಕುಂಬಳೆ ಕೃಷ್ಣ ನಗರದ ಶ್ರೀಮೌನೇಶ ಮಂದಿರದಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದ್ದು ಮಾ.6ಕ್ಕೆ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ಆಗಮಿಸಲಿದ್ದು ಕ್ಷೇತ್ರದಲ್ಲಿ ಮಾ.12ರ ವರೆಗೆ ಮೊಕ್ಕಾಂ ಹೂಡಲಿದ್ದಾರೆ ಎಂದರು.
ಕಾರ್ಯಧ್ಯಕ್ಷ ಕೆ.ಭುವನೇಶ ಆಚಾರ್ಯ ತಾಳಿಪಡ್ಪು ಮಾತನಾಡುತ್ತಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶ್ರೀಶ್ರೀಗುರುನಾಥ ವೇದಿಕೆಯಲ್ಲಿ ದಿನಂಪ್ರತಿ ಧಾರ್ಮಿಕ ಸಭಾ ಕಾರ್ಯಕ್ರಮ, ಯುವ ಸಂಗಮ,ಮಾತೃಸಂಗಮ,ಪ್ರಶಸ್ತಿ ಪ್ರದಾನ,ಸಾಧಕರಿಗೆ ಸನ್ಮಾನ,ಭಜನೆ,ಹರಿಕಥೆ,ನಾಟಕ,ನೃತ್ಯ ವೈವಿಧ್ಯ,ಯಕ್ಷಗಾನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕ್ಷೇತ್ರದ ಪ್ರಧಾನ ಅರ್ಚಕ ದುರ್ಗಾಪ್ರಸಾದ್ ಕೆ.ಆರ್.ಆಚಾರ್ಯ ಮಾತನಾಡುತ್ತಾ ಮಾ.11ಕ್ಕೆ ಬ್ರಹ್ಮ ಕಲಶಾಭಿಷೇಕದೊಂದಿಗೆ
ಕ್ಷೇತ್ರದಲ್ಲಿ ಪ್ರಥಮವಾಗಿ ಶ್ರೀ ದೇವರ ಬಿಂಬ ಬಲಿ ಉತ್ಸವ,ರಾತ್ರಿ ಭೂತ ಬಲಿ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕ್ಷೇತ್ರದ ಕೋಶಾಧಿಕಾರಿ ಎ.ಎಸ್.ಶಿವಾನಂದ ಆಚಾರ್ಯ ಪ್ರತಾಪನಗರ ಮಾತನಾಡಿ ಕ್ಷೇತ್ರದಲ್ಲಿ ನಿರ್ಮಾಣ ಕಾಮಗಾರಿ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸುಮಾರು 25 ಲಕ್ಷ ರೂ.ವೆಚ್ಚ ಅಂದಾಜಿಸಲಾಗಿದ್ದು ಪ್ರತಿಯೋರ್ವರ ಸಹಕಾರದಿಂದ ಬ್ರಹ್ಮಕಲಶೋತ್ಸವ ನಡೆಸಲಾಗುತ್ತದೆ ಎಂದರು. ಸಭೆಯಲ್ಲಿ ಪ್ರಚಾರ ಸಮಿತಿಯ ಸಂಚಾಲಕ ಶ್ರೀಕಾಂತ್ ಕಾಸರಗೋಡು, ಮಾತೃ ಸಮಿತಿಯ ಜಯಂತಿ ವಾಸುದೇವ ಆಚಾರ್ಯ,ಲೋಹಿತ್ ಕುಮಾರ್ ಆಚಾರ್ಯ ಮಠದ ಮನೆ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.