ಮಧೂರು: ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಸನ್ನಿಧಾನಂಗಳವರ ತತ್ಕರ ಕಮಲ ಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀಪಾದಂಗಳವರ `ವಿಜಯ ಯಾತ್ರೆ' ಅಂಗವಾಗಿ ಮಾರ್ಚ್ 6 ಮತ್ತು 7 ರಂದು ಜಗದ್ಗುರುಗಳವರು ಕಾಸರಗೋಡಿನಲ್ಲಿರುವರು.
ಮಾರ್ಚ್ 6 ರಂದು ಮಧ್ಯಾಹ್ನ ಉಡುಪಿಯಿಂದ ಹೊರಟು ಸಂಜೆ 4.30 ಕ್ಕೆ ಕೇರಳ ಕರ್ನಾಟಕದ ಗಡಿ ಪ್ರದೇಶವಾದ ತಲಪ್ಪಾಡಿಯಲ್ಲಿ ಸಕಲ ಸರ್ಕಾರಿ ಗೌರವಾದರಗಳೊಂದಿಗೆ ಜಗದ್ಗುರುಗಳವರನ್ನು ಬರಮಾಡಿಕೊಳ್ಳಲಾಗುವುದು. ಸಂಜೆ 5.30 ಕ್ಕೆ ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಆಗಮಿಸಲಿರುವರು.
ಸಂಜೆ 6 ಕ್ಕೆ ವೇದಘೋಷದೊಂದಿಗೆ ಶ್ರೀಗಳವರನ್ನು ಕ್ಷೇತ್ರಕ್ಕೆ ಬರಮಾಡಿಕೊಂಡು ಧೂಳಿ ಪಾದಪೂಜೆ, ದರ್ಶನ, ಸತ್ಸಂಗ, ಪಾದಪೂಜೆ, ಆಶೀರ್ವಚನದೊಂದಿಗೆ ಸಂಪೂಜ್ಯರ ವಾಸ್ತವ್ಯ, ಮರುದಿನ ಮಾ.7 ರಂದು ಬೆಳಗ್ಗೆ ಪೂಜೆ, ಪಾದಪೂಜೆ, ಭಕ್ತ ದರ್ಶನ, ಮಧ್ಯಾಹ್ನ ಪೂಜೆ, ಪ್ರಸಾದ ಭೋಜನ ಬಳಿಕ 2.30 ಕ್ಕೆ ಕೇರಳದ ಕಲ್ಲಿಕೋಟೆಗೆ ತೆರಳಲಿರುವರು.
ಎರಡು ದಿನಗಳ ಕಾಲ ಜಗದ್ಗುರುಗಳ ವಿಜಯ ಯಾತ್ರೆಯ ಯಶಸ್ವಿಗಾಗಿ ಮಧೂರು ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶೃಂಗೇರಿ ಜಗದ್ಗುರು ಪೀಠದ ಅನುಯಾಯಿಗಳಾದ ವಿವಿಧ ಸಮಾಜ ಬಾಂಧವರು, ಭಕ್ತಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮಧೂರು ದೇವಸ್ಥಾನದಲ್ಲಿ ಸೇರಿದ ಭಕ್ತ ಜನರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಎ.ಮಹಾಲಿಂಗಯ್ಯ, ಎ.ಮನೋಹರ, ಬಲರಾಮ ಭಟ್, ಎಸ್.ಎನ್.ಮಯ್ಯ, ಗಿರೀಶ್ ಸಂಧ್ಯಾ, ಉಮೇಶ್ ನಾೈಕ್, ನ್ಯಾಯವಾದಿ ಅನಂತರಾಮ, ಎ.ಪ್ರಭಾಶಂಕರ, ಸುರೇಶ ಸಿ.ಎಚ್, ಜಗದೀಶ್ ಕೂಡ್ಲು, ಗುರುಪ್ರಸಾದ್ ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು.