ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಪ್ರಧಾನ ರಸ್ತೆಗಳ ಅಭಿವೃದ್ಧಿ ಮಾಡಬೇಕೆಂಬ ಮನವಿಯನ್ನು ಪೈವಳಿಕೆ ಗ್ರಾ.ಪಂ ಸಜಂಕಿಲ ವಾರ್ಡ್ ಸದಸ್ಯ ಸುಬ್ರಹ್ಮಣ್ಯ ಭಟ್ ಸಂಸದರಿಗೆ ಇತ್ತೀಚೆಗೆ ನೀಡಿದರು.
ಮಂಜೇಶ್ವದಲ್ಲಿ ನಡೆದ ನೂತನ ನೋಂದಣಿ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಸಂಸದರಿಗೆ ಮನವಿಯನ್ನು ನೀಡಲಾಯಿತು. ಬಾಯಾರುಪದವಿನಿಂದ ಸರ್ಕುತ್ತಿ ಸಜಂಕಿಲ ಆವಳಮಠ ಸಮೀಪವಾಗಿ ಚೇವಾರು ಲೋಕೋಪಯೋಗಿ ರಸ್ತೆಯನ್ನು ಸಂಪರ್ಕಿಸುವ ರಸ್ತೆಯ ಡಾಮರೀಕರಣವಾಗಬೇಕು, ಚೇವಾರಿನಿಂದ ಆವಳ ಮಸೀದಿ ಮೂಲಕ ರಸ್ತೆ ಸಹಿತ ಬಾಯಾರು ಸಹಕಾರಿ ಬ್ಯಾಂಕ್ ರಸ್ತೆಯ ಡಾಮರೀಕರಣವನ್ನು ನಡೆಸಬೇಕೆಂಬ ಬೇಡಿಕೆಯನ್ನು ಮುಂದಿರಿಸಲಾಯಿತು. ಹಲವು ವರ್ಷಗಳಿಂದ ಚೇವಾರು ಭಾಗಕ್ಕೆ ಸನಿಹ ಸಂಪರ್ಕ ಕಲ್ಪಿಸುವ ಆವಳ ಮಠ ಚೇವಾರು ರಸ್ತೆ ಡಾಮರೀಕರಣ ಅರ್ಧಕ್ಕೆ ನಿಂತಿದೆ, ಇದನ್ನು ಮುಂದುವರಿಸಿಬೇಕಿದೆ, ಅದರಂತೆ ಆವಳ ಮಸೀದಿ ಮುಂಭಾಗವಾಗಿ ಗೋಳಿಯಡ್ಕವಾಗಿ ಚೇವಾರಿಗೆ ಸಂಪರ್ಕ ನೀಡುವ ರಸ್ತೆಯನ್ನು ಡಾಮರೀಕರಣಗೊಳಿಸಬೇಕಿದೆ ಎಂಬ ಮನವಿಯನ್ನು ಸಂಸದರಿಗೆ ನೀಡಲಾಯಿತು.
ಈ ಭಾಗದ ರಸ್ತೆ ಅಭಿವೃದ್ಧಿಯಿಂದ ಪ್ರವಾಸೋದ್ಯಮಕ್ಕೂ ಹೆಚ್ಚಿನ ಉತ್ತೇಜನ ಸಿಗಲಿದೆ. ಪೊಸಡಿಗುಂಪೆ ಚಾರಣಧಾಮಕ್ಕೆ ಆಗಮಿಸುವ ಚಾರಣಿಗರು, ಪ್ರವಾಸಿಗರಿಗೂ ಉತ್ತಮ ಸಂಪರ್ಕಸೇತುವಾಗಿ ಈ ರಸ್ತೆಗಳು ಸಹಕಾರಿಯಾಗಲಿದೆ. ಈ ಭಾಗದಲ್ಲಿ ಪರಿಶಿಷ್ಟ ವಿಭಾಗದ ಹಲವು ಮನೆಗಳಿದ್ದು ನೂತನ ರಸ್ತೆ ಡಾಮರೀಕರಣದಿಂದ ಎಲ್ಲರಿಗೂ ಪ್ರಯೋಜನವಾಗಲಿದೆ ಮಾತ್ರವಲ್ಲದೆ ಆರಾಧನಾ ಕ್ಷೇತ್ರಗಳಿಗೂ ಸಂಪರ್ಕ ಸುಲಭಸಾಧ್ಯವಾಗಲಿದೆ ಎಂದು ಸುಬ್ರಹ್ಮಣ್ಯ ಭಟ್ ಮನವಿಯಲ್ಲಿ ತಿಳಿಸಿದ್ದಾರೆ.