HEALTH TIPS

ಪೆರಡಾಲ ಕೊರಗ ಕಾಲನಿಗೆ ಮಂಚ, ಬೆಡ್ ಶೀಟ್ ವಿತರಣೆ

      ಬದಿಯಡ್ಕ: ಕಾಲನಿವಾಸಿಗಳ ನವಜೀವನದ ಕನಸನ್ನು ಹೊತ್ತು ಶಾಲಾ ವಿದ್ಯಾರ್ಥಿಳೊಳಗೊಂಡ ತಂಡವೊಂದು ರಂಗಕ್ಕಿಳಿದಿದೆ. ಬದಿಯಡ್ಕ ಕೊರಗ ಕಾಲನಿ ಅಭಿವೃದ್ದಿ ಯೋಜನೆಯ ಭಾಗವಾಗಿ ಪೆರಡಾಲ ನವಜೀವನ ಪ್ರೌಢಶಾಲೆಯ ಎನ್.ಎಸ್.ಎಸ್. ಘಟಕ, ಸ್ಟೂಡೆಂಟ್ ಪೊಲೀಸ್ ಹಾಗೂ ಬದಿಯಡ್ಕ ಜನಮೈತ್ರಿ ಪೋಲೀಸ್ ಸಹಯೋಗದಲ್ಲಿ ಕೋಲನಿಯ ಪ್ರತಿಯೊಂದು ಮನೆಗೆ ಮಂಚ, ಬೆಡ್‍ಶೀಟ್, ತಲೆದಿಂಬುಗಳನ್ನು ನೀಡಲಾಯಿತು. ಕೋಲನಿ ಜನತೆಯ ಸಂಕಷ್ಟದ ಕುರಿತಾದ ವಿವರಗಳನ್ನು ಮಾಧ್ಯಮದ ಮೂಲಕ ತಿಳಿದ ನವಿ ಮುಂಬಯಿಯಲ್ಲಿರುವ ಮಲಯಾಳಿಗಳ ನೇತೃತ್ವದ ಮನುಷ್ಯ ಸ್ನೇಹಿ ಒಕ್ಕೂಟವು ಇದಕ್ಕೆ ಅಗತ್ಯವಿರುವ 1.76 ಲಕ್ಷ ರೂಪಾಯಿನ್ನು ನೀಡಿದ್ದರು.
       ಕಾಲನಿಯ ಸಮಗ್ರ ಅಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಸರಕಾರವು ಅದೆಷ್ಟೋ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಅದ್ಯಾವುದೂ ಸಮರ್ಪಕವಾಗಿ ಬಳಕೆಯಾಗದ ಕಾರಣ ಕಾಲನಿಯು ಅಭಿವೃದ್ದಿಯನ್ನು ಕಾಣುತ್ತಿಲ್ಲ. ಸರಿಯಾದ ಮಾರ್ಗದರ್ಶನದ ಕೊರತೆಯೂ ಅವರು ಹಿಂದುಳಿಯಲು ಕಾರಣವಾಗಿದೆ. ಪೆರಡಾಲ ಕೊರಗ ಕಾಲನಿಯ ಜನತೆಯ ಆದಾಯಕ್ಕೆಂದು ಸರಕಾರದ ವತಿಯಿಂದ ಅಲ್ಲಿನ ಕಾಡನ್ನು ಕಡಿದು ರಬ್ಬರ್ ಕೃಷಿಯನ್ನು ಮಾಡಲಾಯಿತು. ಆದರೆ ಕಾಡನ್ನೇ ಆಶ್ರಯಿಸಿ ಬದುಕನ್ನು ಸಾಗಿಸುವ ಅವರು ತಮ್ಮ ಬುಟ್ಟಿ ಹೆಣೆಯುವ ಕಾಯಕಕ್ಕೆ ಇತರೆಡೆಗಳಿಗೆ ತೆರಳಿ ಕಾಡುಬಳ್ಳಿಗಳನ್ನು ಸಂಗ್ರಹಿಸುವಂತಾಯಿತು.
       ನವಜೀವನದ ಕನಸು:
      ಪೆರಡಾಲ ನವಜೀವನ ಶಾಲೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ತಂಡವು ಕೊರಗ ಕಾಲನಿಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಸಿದೆ. ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಕೋಲನಿವಾಸಿಗಳಲ್ಲಿ ಶುಚಿತ್ವ ಹಾಗೂ ಆರೋಗ್ಯದ ಕುರಿತು ಕಾಳಜಿಯನ್ನುಂಟುಮಾಡುವ ಹಲವಾರು ಚಟುವಟಿಕೆಗಳನ್ನು ವಿದ್ಯಾರ್ಥಿಗಳು ಕೈಗೊಳ್ಳುತ್ತಿದ್ದು, ತಂಡಗಳಾಗಿ ಕಾಲನಿಯ ಪರಿಸರದಲ್ಲಿ ಅವರು ಓಡಾಡುತ್ತಾರೆ. ಕೆಲವು ತಿಂಗಳುಗಳ ಹಿಂದೆ ಎಲ್ಲಾ ಮನೆಗಳಿಗೆ ಫ್ಯಾನ್ ವಿತರಿಸಲಾಗಿದೆ.
        33 ಕುಟುಂಬಗಳಿಗೆ ಮಂಚ ವಿತರಣೆ ಸಮಾರಂಭ:
      ಕೊರಗ ಕಾಲನಿಯ ಎಂಜಿಎಲ್‍ಸಿ ಶಾಲೆಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕಾಲನಿ ವಾಸಿಗಳಿಗೆ ಕಾಸರಗೋಡು ಡಿವೈಎಸ್‍ಪಿ ಹಸೈನಾರ್ ಮಂಚ ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜಮುಖೀ ಕಾರ್ಯಗಳಿಗೆ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಮೂಲಕ ನವಜೀವನ ಶಾಲೆಯು ಮಾದರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯ ಚಿಂತನೆಗಳು ಜಾಗೃತಗೊಳ್ಳಲು ಇಂತಹ ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದರು. ಶಾಲಾ ಪ್ರಭಾರ ಪ್ರಾಂಶುಪಾಲ ಶ್ರೀಕೃಷ್ಣ ಎಂ. ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್.ಪ್ರೋಗ್ರಾಂ ಆಫೀಸರ್ ಶ್ರೀನಾಥ್ ಯೋಜನೆಯ ಕುರಿತು ವಿವರಿಸಿದರು. ಜಿಲ್ಲಾ ಟ್ರೈಬಲ್ ಆಫೀಸರ್ ಅನಂತ ಕೃಷ್ಣ, ಊರುಕೂಟದ ವಿಮಲ, ರಾಮ ಮುರಿಯಂಕೂಡ್ಲು, ಎಂ.ಜಿ.ಎಲ್.ಸಿ. ಶಾಲೆಯ ಅಧ್ಯಾಪಕ ಬಾಲಕೃಷ್ಣ ಅಚ್ಚಾಯಿ ಮಾತನಾಡಿದರು. ನವಜೀವನ ಶಾಲೆಯ ಅಧ್ಯಾಪಕರುಗಳಾದ ಉಣ್ಣಿಕೃಷ್ಣನ್, ರಾಜೀವನ್, ರಾಜೇಶ್ ಅಗಲ್ಪಾಡಿ, ನಿರಂಜನ ರೈ ಪೆರಡಾಲ, ವಿಜಯನ್, ಸತ್ಯದಾಸನ್, ಶ್ರೀಜಾ, ಲಲಿತಾ ನೇತೃತ್ವವನ್ನು ನೀಡಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ಬದಿಯಡ್ಕ ಠಾಣಾಧಿಕಾರಿ ಅನೀಶ್ ಸ್ವಾಗತಿಸಿ, ಜನಮೈತ್ರಿ ಪೊಲೀಸ್ ಅಧಿಕಾರಿ ಅನೂಪ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries