ನಾಗ್ಪುರ್: ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ರಾಕ್ಷಸನಿಗೆ ಹೋಲಿಸಿರುವ ಶಿವಸೇನೆ, ಭಾರತ ಮಾತೆಯನ್ನು ಬಿಜೆಪಿಯ ಹುಚ್ಚಾಟದಿಂದ ರಕ್ಷಿಸುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್)ಕ್ಕೆ ಆಗ್ರಹಿಸಿದೆ.
ಈ ಸಂಬಂಧ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ಶಿವಸೇನಾ ನಾಯಕ ಕಿಶೋರ್ ತಿವಾರಿ ಅವರು, ಹಿಂದೂಳಿದ ಮುಸ್ಲಿಮರಿಗೆ ಶೇ. 5 ರಷ್ಟು ಮೀಸಲಾತಿ ನೀಡುವ ಮಹಾರಾಷ್ಟ್ರ ಸರ್ಕಾರದ ಪ್ರಸ್ತಾವನೆ ವಿರೋಧಿಸುವ ಬಿಜೆಪಿ ಮತ್ತು ಇತರೆ ಹಿಂದೂಪರ ಸಂಘಟನೆಗಳ ನೀತಿಯಿಂದಾಗಿ ಆರ್ ಎಸ್ ಎಸ್ ಗೆ ಹಿನ್ನಡೆಯಾಗಲಿದೆ ಎಂದು ಹೇಳಿದ್ದಾರೆ. ಕಳೆದ ಆರು ವರ್ಷಗಳಿಂದ ಸಮಾಜದ ಎಲ್ಲಾ ವರ್ಗದವರು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಆಗ್ರಹಿಸುತ್ತಿದ್ದು, ಇದಕ್ಕೆ ಬಿಜೆಪಿ-ಹಿಂದೂ ಪರ ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಇತ್ತೀಚಿಗೆ ಶಿವಸೇನೆ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರ ಮುಸ್ಲಿಮರಿಗೆ ಶೇ.5 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಗೆ ಮಾತ್ರ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಅಲ್ಲದೆ ಶಿವಸೇನಾ ಮುಸ್ಲಿಮರ ಪರವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಬಿಜೆಪಿ ಹಿಂದೂಗಳಿಗೆ ಮತ್ತು ಹಿಂದೂತ್ವಕ್ಕಾಗಿ ಏನನ್ನೂ ಮಾಡಿಲ್ಲ ಎಂದು ತಿವಾರಿ ಆರ್ ಎಸ್ ಎಸ್ ಮುಖ್ಯಸ್ಥರಿಗೆ ಬರೆದ ಬಹಿರಂಗ ಪತ್ರದಲ್ಲಿ ದೂರಿದ್ದಾರೆ.
ತಿವಾರಿ ಅವರು ತಮ್ಮ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೆÇೀಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ ಎಸ್ ಎಸ್ ಅಲ್ಪ ಸಂಖ್ಯಾತರನ್ನು ಮತ್ತು ಇತರೆ ಸಮುದಾಗಳ ಬಡವರನ್ನು ಪ್ರಮುಖ ವಾಹಿನಿಗೆ ತರಲು ಯತ್ನಿಸುತ್ತಿವೆ. ಆದರೆ ಸಂಘ ಪರಿವಾರದವರು ಎಂದು ಕರೆಯಿಸಿಕೊಳ್ಳುವ ಕೆಲವರು ಪ್ರಧಾನಿ ಮೋದಿ ಹಾಗೂ ಆರ್ ಎಸ್ ಎಸ್ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.