ಪೆರ್ಲ:ಭಗವಂತನ ಆರಾಧನೆಯಲ್ಲಿ ಭಜನಾ ಸಂಕೀರ್ತನೆ ಅತ್ಯಂತ ಶ್ರೇಷ್ಠ. ಭಕ್ತಿ ಭಾವದ ಭಜನಾ ಆಲಾಪನೆ, ಸಾಮೂಹಿಕ ಸಂಕೀರ್ತನೆ, ಪ್ರಚುರ ಪಡಿಸುವ ಧೀಮಂತಿಕೆಯಿಂದ ಮನಸ್ಸು ಸಮ್ಮಿಲಿತವಾಗಿ ಸಮರ್ಪಣಾ ಭಾವದ ಧೀಶಕ್ತಿ ಬೆಳೆಯುವುದು.ಉತ್ತಮ ಸಂಸ್ಕಾರ ಮನಸ್ಸನ್ನು ನಿಯಂತ್ರಿಸುವುದು. ಉತ್ತಮ ಸಂಸ್ಕಾರಕ್ಕೆ ನಿತ್ಯ ಭಜನೆ ಅಗತ್ಯ. ಶುದ್ಧ ಅಂತರಾತ್ಮ ನಮ್ಮದಾಗಿದ್ದಲ್ಲಿ ಪರಿಪೂರ್ಣ ಆನಂದ ಸಿಗುವುವುದು.ದೇವರ ನಿತ್ಯ ಪ್ರಾರ್ಥನೆಯಿಂದ ನಮ್ಮ ಹೃದಯಾಂತರಾಳದ ದೈವತ್ವ ಜಾಗ್ರತೆಗೊಳ್ಳುವುದು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಕಾಟುಕುಕ್ಕೆ ಶ್ರೀ ಸುಬಾಯ ದೇವಸ್ಥಾನ ಹಾಗೂ ಶ್ರೀ ಸುಬಹ್ಮಣ್ಯೇಶ್ವರ ಪ್ರಸಾದಿತ ಭಜನಾ ಸಂಘ ಕಾಟುಕುಕ್ಕೆ ಆಶ್ರಯದಲ್ಲಿ ಭಜನಾ ಸಂಘದ 75ನೇ
ವಾರ್ಷಿಕೋತ್ಸವ, 75 ಗಂಟೆಗಳ ಅಖಂಡ ಭಜನೆ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನೆ ನೀಡಿದರು.
ಪ್ರಬಲ ಸಂಪದ್ಭರಿತ ರಾಷ್ಟ್ರ್ರ ಚೀನಾವನ್ನು ಕೇವಲ ಒಂದು ಸೂಕ್ಷ್ಮ ಕೋಶ ಜೀವಿ ತಲ್ಲಣ ಗೊಳಿಸಿದೆ. ಅಸುರ ಪ್ರವೃತ್ತಿ, ಹಿಂಸೆಗೆ ಪ್ರಚೋದನೆ, ದಳ್ಳುರಿ ಋಣಾತ್ಮಕ ಚಿಂತನೆಗಳು ತುಂಬಿದಂತೆ ಪ್ರಾಕೃತಿಕ ವೈಪರೀತ್ಯ, ವಿಕೋಪಗಳು ಉಂಟಾಗುತ್ತಿವೆ. ಕಲಿಯುಗದ ಅವಾಂತರ, ಸ್ವಾರ್ಥ ಮನೋಭಾವನೆಯ ರಾಜಕೀಯ, ಧಾರ್ಮಿಕ ಕ್ಷೇತ್ರದಲ್ಲಿ ಅಧರ್ಮ, ಅನ್ಯಾಯಗಳು ಮಿತಿ ಮೀರಿದೆ. ಮನೆ, ಸಮಾಜ ಎಲ್ಲೇ ಹೋದರೂ ಋಣಾತ್ಮಕ ಅಂಶಗಳ ಬಗ್ಗೆ ಮಾತುಕತೆ, ಚರ್ಚೆಗಳು ನಡೆಯುತ್ತಿದೆ. ನಮ್ಮ ಪರಂಪರೆ, ಇತಿಹಾಸವನ್ನು ಅವಲೋಕಿಸಿದಾಗ ಜಗತ್ತಿನ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಸೂತ್ರಧಾರ ಭಗವಂತ ಎಂಬುದು ತಿಳಿಯುತ್ತದೆ. ಭಗವಂತನ ಸಾಮ್ರಾಜ್ಯದಲ್ಲಿ ನಾವು ಕೇವಲ ಅಲ್ಪಾಯುಷಿ ಪಾತ್ರಧಾರಿಗಳು. ಜೀವನದಲ್ಲಿ ನಾವು ಯಾವ ರೀತಿ ವರ್ತಿಸುತ್ತೇವೆ ಎಂಬುದನ್ನು ಪ್ರತಿಯೊಬ್ಬನೂ ಸ್ವಯಂ ಅವಲೋಕನ ನಡೆಸಬೇಕು. ದೇವಾಲಯಗಳ ಪಾವಿತ್ರ್ಯತೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ.ಭಕ್ತರ ಸೇವೆ, ಸಮರ್ಪಣಾ ಭಾವದಿಂದ ಮಾನಸಿಕ ಪ್ರಬುದ್ಧತೆ, ಧನಾತ್ಮಕ ಚಿಂತನೆ ವೃದ್ಧಿಸುವುದು.ನಿತ್ಯ ಆರಾಧನೆ, ಸಂಕೀರ್ತನೆಗಳಿಂದ ದೇವಸ್ಥಾನ ಮಠ ಮಂದಿರಗಳ ಚೈತನ್ಯ ಹಾಗೂ ಪ್ರಭಾವ ಹೆಚ್ಚುವುದು.ದೇವರ ಪ್ರಭಾ ವಲಯ ಸಮಾಜ ಕಡೆಗೆ ಆವರಿಸಿದಂತೆ ಸುಭಿಕ್ಷೆ, ಸಮೃದ್ಧಿ, ಸದ್ಭಾವನೆ, ಸಂಸ್ಕಾರಯುತ ಧೀಮಂತ ಸಮಾಜ ನೆಲೆ ನಿಲ್ಲುವುದು ಎಂದರು.
ದೇವಳದ ಆಡಳಿತ ಮೊಕ್ತೇಸರ ನಾರಾಯಣನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 75 ಸಂವತ್ಸರಗಳಿಂದ ತಿಂಗಳ ಷಷ್ಠಿ ತಿಥಿಗಳಂದು ಭಜನೆಯನ್ನು ನಡೆಸುತ್ತಾ, ಭಜನಾ ಸಂಘದ ಸ್ಥಾಪನೆಯ ದಿನ ವಾರ್ಷಿಕೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿರುವುದು ಮಹತ್ತರ ಸಾಧನೆಯಾಗಿದ್ದು ಸುಬ್ರಹ್ಮಣ್ಯ ದೇವರ ಅನುಗ್ರಹದ ಫಲವಾಗಿದೆ ಎಂದರು. ಮಾಜಿ ಆಡಳಿತ ಮೊಕ್ತೇಸರ ಸಿ.ಸಂಜೀವ ರೈ, ದೇವಳದ ಅರ್ಚಕ ನಾರಾಯಣ ಮಯ್ಯ, ಮಾಜಿ ಆಡಳಿತ ಮೊಕ್ತೇಸರ ಸಚ್ಚಿದಾನಂದ ಖಂಡೇರಿ, ವಿಷ್ಣುಪ್ರಕಾಶ ಪಿಲಿಂಗಲ್ಲು ಮತ್ತು ಡಾ.ಕೃಷ್ಣ ಭಟ್ ಸೂರ್ಡೇಲು ಉಪಸ್ಥಿತರಿದ್ದರು. ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಭಜನಾ ಸಂಘದ ಸದಸ್ಯೆಯರು ಪ್ರಾರ್ಥಿಸಿದರು.ಭಜನಾ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ ಮಾಯಿಲಂಗಿ ಸ್ವಾಗತಿಸಿ, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ ವಂದಿಸಿದರು. ಕಾರ್ಯದರ್ಶಿ ದೀಪಕ್ ಭಂಡಾರದ ಮನೆ ನಿರೂಪಿಸಿದರು. ಭಜನಾ ಸಂಘದ ಹಿರಿಯ ಸದಸ್ಯರನ್ನು ಈ ಸಂದರ್ಭ ಅಭಿನಂದಿಸಲಾಯಿತು.
ಇಂದು(ಮಾರ್ಚ್ 2ರಂದು) ಬೆಳಗ್ಗೆ 7.50ಕ್ಕೆ ಉಷಾಪೂಜೆ 11ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಕಾಟುಕುಕ್ಕೆ ದೇವಳದ ಮಾಜಿ ಆಡಳಿತ ಮೊಕ್ತಸರ ಸಿ.ಸಂಜೀವ ರೈ ಅಧ್ಯಕ್ಷತೆ ವಹಿಸುವರು. ಮಾರ್ಚ್ 3ರಂದು ಬೆಳಗ್ಗೆ 7.50ಕ್ಕೆ ಉಷಾಪೂಜೆ,11ಕ್ಕೆ ಆರಂಭವಾಗುವ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಕ್ಷೇತ್ರದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಕಾಟುಕುಕ್ಕೆ ದೇವಳದ ಮಾಜಿ ಆಡಳಿತ ಮೊಕ್ತಸರ ವಿಷ್ಣುಪ್ರಸಾದ್ ಪಿಲಿಂಗಲ್ಲು ಅಧ್ಯಕ್ಷತೆ ವಹಿಸುವರು.