ತಿರುವನಂತಪುರ: ಕರೊನಾ ವೈರಸ್ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಅತೀವ ಜಾಗ್ರತೆ ಪಾಲಿಸುತ್ತಿದ್ದು, ದಿನದ 24ತಾಸುಗಳ ಕಾಲ ನಿಗಾಯಿರಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಿರುವುದಾಗಿ ರಾಜ್ಯ ಆರೋಗ್ಯ ಖಾತೆ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ.
ಈಗಾಗಲೇ ಮೂರು ಮಂದಿಗೆ ಕರೊನಾ ಕಂಡುಬಂದಿದ್ದು, ಸೂಕ್ತ ಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖರಾಗಿ ಇವರು ಮನೆಗೆ ತೆರಳಿದ್ದರು. ಈ ಸಂದರ್ಭ ನೂರಾರು ಮಂದಿಯ ಮೇಲೆ ತೀವ್ರ ನಿಗಾ ವಹಿಸಲಾಗಿತ್ತು. ಈ ಮಧ್ಯೆ ಕರೊನಾ ವೈರಸ್ ವಿರುದ್ಧ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಚಟುವಟಿಕೆಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಶ್ಲಾಘನೆ ವ್ಯಕ್ತಪಡಿಸಿದೆ. ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಕೇಂದ್ರ ಆರೋಗ್ಯ ಖಾತೆ ಕಾರ್ಯದರ್ಶಿ ರಾಜೀವ್ ಗೌಬಾ ನಡೆಸಿರುವ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕರೊನಾ ವಿರುದ್ಧ ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ಮೆಚ್ಚುಗೆ ಸೂಚಿಸಿರುವುದಾಗಿ ಸಚಿವೆ ತಿಳಿಸಿದ್ದಾರೆ.
ವಿಶ್ವದ 80ರಷ್ಟು ರಾಷ್ಟ್ರಗಳಿಗೆ ಕರೊನಾ ವ್ಯಾಪಿಸಿದ್ದು, ವಿದೇಶಗಳಿಂದ ಆಗಮಿಸುವವರ ಬಗ್ಗೆ ನಿಗಾಯಿರಿಸಲಾಗುವುದು. ವಿದೇಶದಿಂದ ಆಗಮಿಸುವವರು ತಪಾಸಣೆಗಾಗಿ ಜವಾಬ್ದಾರಿಯುತವಾಗಿ ಸಹಕರಿಸಬೇಕು. ಇವರು ಸವಯಂ ಸುರಕ್ಷೆ ಕೈಗೊಳ್ಳುವುದರ ಜತೆಗೆ ತಮ್ಮ ಪ್ರವಾಸದ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಲಾಗಿದೆ.
ಕರೊನಾ ಬಾಧಿಸಿರುವ ಪ್ರದೇಶದಿಂದ ಆಗಮಿಸಿರುವವರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೊಳಪಡಿಸಿ, ಸಂಶಯ ಕಂಡುಬಂದಲ್ಲಿ, ಐಸೊಲೇಶನ್ ವಾರ್ಡಿಗೆ ದಾಖಲಿಸಲಾಗುವುದು. ವೈರಸ್‍ಬಾಧಿತ ಪ್ರದೇಶದಿಂದ ಆಗಮಿಸಿದವರಲ್ಲಿ ಯಾವುದೇ ಸೋಂಕು ಇಲ್ಲದಿದ್ದರೂ, ಅವರ ಮನೆಯಲ್ಲಿರಿಸಿ ನಿಗಾವಹಿಸಲಾಗುವುದು ಎಂದೂ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.