ಕಾಸರಗೋಡು: ರೋಗ ಮತ್ತು ಕೀಟಬಾಧೆಯಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ಮಲೆನಾಡ ಪ್ರದೇಶದ ತೆಂಗು ಕೃಷಿಕರಿಗೆ ರೋಗ ಮತ್ತು ಕೀಟ ನಿಯಂತ್ರಣ ಯೋಜನೆ ಮೂಲಕ ಕೃಷಿ ಇಲಾಖೆ ಸಾಂತ್ವನ ನೀಡುತ್ತಿದೆ.
ಪರಪ್ಪ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ 25 ಹೆಕ್ಟೇರ್ ಜಾಗದಲ್ಲಿ 4375 ತೆಂಗಿನ ಮರಗಳು ಈ ಯೋಜನೆಗಾಗಿ ಆಯ್ಕೆಗೊಂಡಿವೆ. ಯೋಜನೆಯ ಪ್ರಕಾರ ಕೀಟ ನಾಶಕ ಮತ್ತು ಔಷಧಗಳನ್ನು ಬೇವಿನ ಹಿಂಡಿಯೊಂದಿಗೆ ಬೆರೆಸಿ ಆ ಮಿಶ್ರಣವನ್ನು ತೆಂಗಿನ ಮೇಲ್ಭಾಗಕ್ಕೆ ಧಾರೆಯಾಗಿ ಎರೆಯಲಾಗುತ್ತದೆ. ಒಂದು ಕಿಲೋ ಬೇವಿನ ಹಿಂಡಿಯನ್ನು ತೆಂಗಿನ ಮರಕ್ಕೆ ಗೊಬ್ಬರ ರೂಪದಲ್ಲಿ ಬುಡದಲ್ಲೂ ಹಾಕಲಾಗುತ್ತದೆ. ಯೋಜನೆಯ ಯಶಸ್ಸಿಗಾಗಿ ಕೃಷಿಕರಿಗೆ ನೇರವಾಗಿ ವಿತರಿಸುವ ಬದಲು ಯೋಜನೆ ಪ್ರಕಾರ ಲಭಿಸಿದ ಮೊಬಲಗಿಗೆ ಕೃಷಿಕರ ಪಾಲನ್ನೂ ಸೇರಿಸಿ ಅಗ್ರೋ ಸರ್ವೀಸ್ ಸೆಂಟರ್ ನೇರವಾಗಿ ಯೋಜನೆ ಜಾರಿಗೊಳಿಸುತ್ತಿದೆ. ಇದಕ್ಕಾಗಿ ಯೋಜನೆ ಪ್ರಕಾರ ಆಯ್ದ ಕೃಷಿಕರಿಗೆ ಪರಪ್ಪ ಅಗ್ರೋ ಸರ್ವೀಸ್ ಸೆಂಟರ್ ನೇತೃತ್ವದಲ್ಲಿ ಜನಜಾಗೃತಿ ತರಗತಿಯೂ ನಡೆಸಲಾಗಿದೆ.
ಕಳ್ಳಾರ್ ಗ್ರಾಮ ಪಂಚಾಯತ್‍ನಲ್ಲಿ 2138, ಪನತ್ತಡಿ ಗ್ರಾಮ ಪಂಚಾಯತ್‍ನಲ್ಲಿ 1227, ಬಳಾಲ್ ಗ್ರಾಮ ಪಂಚಾಯತ್‍ನಲ್ಲಿ 1010 ತೆಂಗಿನ ಮರಗಳನ್ನು ಈ ನಿಟ್ಟಿನಲ್ಲಿ ಆಯ್ಕೆ ಮಾಡಲಾಗಿದೆ. ಒಂದು ತೆಂಗಿನ ಮರಕ್ಕೆ ತಲಾ 100 ರೂ.ನಂತೆ ಒಂದು ಹೆಕ್ಟೇರ್‍ನಲ್ಲಿ 175 ತೆಂಗಿನ ಮರಗಳಿಗೆ ಸೌಲಭ್ಯ ಲಭಿಸಲಿದೆ. ಯೋಜನೆಯಲ್ಲಿ ಕೃಷಿಕರ ಪಾಲು ಎಂಬ ರೂಪದಲ್ಲಿ ತೆಂಗಿನ ಮರವೊಂದಕ್ಕೆ 30 ರೂ. ನೀಡಬೇಕಾಗುತ್ತದೆ. ಯೋಜನೆಯ ಯಶಸ್ವಿಯಾಗಿ ಜಾರಿಗೊಳ್ಳುವ ವೇಳೆ ರೋಗ-ಕೀಟ ಬಧೆ ನಿಯಂತ್ರಣದಲ್ಲಿರಿಸುವ ಮೂಲಕ ರೋಗ ಹರಡುವುದನ್ನು ತಡೆಯಲೂ ಸಾಧ್ಯವಾಗುತ್ತಿದೆ. ಕೃಷಿ ಭವನಗಳ ಮೂಲಕ ಜೂನ್ ತಿಂಗಳಿಂದ ಕೃಷಿಕರು ಅರ್ಜಿ ಸಲ್ಲಿಸಬಹುದು.
ಅಭಿಮತ:
* ಯೋಜನೆ ಜಾರಿಯಾದ ಪ್ರದೇಶಗಳಲ್ಲಿ ರೋಗ ನಿಯಂತ್ರಣ
ತೆಂಗಿನ ಮಂಡೆರೋಗ ಸಹಿತ ಕಾಯಿಲೆಗಳು, ಕೀಟಗಳ ಹಾವಳಿಯಿಂದ ತೆಂಗಿನ ಕೃಷಿಯನ್ನು ಸಂರಕ್ಷಿಸುವ ಉದ್ದೇಶದಿಂದ ಆರಂಭಿಸಲಾದ ಯೋಜನೆ ಕೃಷಿಕರಿಗೆ ಸಮಾಧಾನವನ್ನು ತಂದಿತ್ತಿದೆ. ಯೋಜನೆ ಜಾರಿಗೊಳಿಸಿರುವ ಪ್ರದೇಶಗಳಲ್ಲಿ ರೋಗ ಮತ್ತು ಕೀಟ ನಿಯಂತ್ರಣ ನಡೆದಿದ್ದು, ತೆಂಗಿನ ಕೃಷಿಯ ಸಂರಕ್ಷಣೆ ನಡೆದಿದೆ.
- ಜಿ.ಎಸ್.ಸಿಂಧು,
ಸಹಾಯಕ ನಿರ್ದೇಶಕಿ
ಪರಪ್ಪ ಅಗ್ರೋ ಸರ್ವೀಸ್ ಸೆಂಟರ್