ಬದಿಯಡ್ಕ: ಮಳೆ ಮಾತ್ರ ಅಲ್ಲ ಇಂತಹದೊಂದು ಸಂಕಷ್ಟವೂ ಅನಿರೀಕ್ಷಿತವಾಗಿ ವಕ್ಕರಿಸಿ ಸಾರ್ವಜನಿಕರು, ಪ್ರಯಾಣಿಕರು ಸಂಕಷ್ಟಕ್ಕೊಳಗಾಗಬೇಕಾದ ದುರ್ಗತಿ ಗಡಿನಾಡಿನದ್ದು. ಡಾಮರೀಕರಣ ನಡೆಸಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಗೆದು ಹಾಕಿದ ರಸ್ತೆ ಮಳೆನೀರಿನಿಂದಾಗಿ ಕೆಸರುಮಯಗೊಂಡಿದೆ. ಇದರಿಂದ ವಿವಿಧೆಡೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಪ್ರಯಾಣಿಕರು ಸಮಸ್ಯೆಗೀಡಾದರು.
ಬದಿಯಡ್ಕ ಸಮೀಪದ ಪೆರ್ಮುಖ ಎಂಬಲ್ಲಿ ಸೋಮವಾರ ಬೆಳಗ್ಗೆ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಚೆರ್ಕಳ ಬದಿಯಡ್ಕ ರಸ್ತೆಯ ಮೆಕ್ಕಡಾಂ ಡಾಮರೀಕರಣಕ್ಕಾಗಿ ಆರಂಭಿಕ ಕಾಮಗಾರಿಯಾಗಿ ಬದಿಯಡ್ಕದಿಂದ ನೆಕ್ರಾಜೆ ವರೆಗೆ ರಸ್ತೆಯನ್ನು ಅಗೆಯಲಾಗಿದೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಯ ನೀರು ರಸ್ತೆಯಲ್ಲಿ ತುಂಬಿಕೊಂಡು ಕೆಸರುಮಯವಾಗಿರುವುದೇ ಸಮಸ್ಯೆಗೆ ಕಾರಣವಾಗಿದೆ.
ಬೆಳಗ್ಗೆ 7.30ರಿಂದ 9.30ರ ವರೆಗೆ ವಾಹನಗಳಿಗೆ ಸಂಚರಿಸಲಾಗದೆ ತೊಂದರೆ ಸೃಷ್ಟಿಯಾಯಿತು. ಬಳಿಕ ಕೆಸರಿನ ಮೇಲೆ ಜಲ್ಲಿಕಲ್ಲು ಹಾಕಿ ವಾಹನ ಸಂಚಾರಕ್ಕೆ ಸೌಕರ್ಯ ಒದಗಿಸಲಾಯಿತು.
ನೀರ್ಚಾಲು ಬಳಿಯ ಕನ್ನೆಪ್ಪಾಡಿಯಿಂದ ಮುಂಡಿತ್ತಡ್ಕಕ್ಕೆ ತೆರಳುವ ರಸ್ತೆಯ ಕೆಲವೆಡೆ ಹೊಂಡಗಳಲ್ಲಿ ನೀರುತುಂಬಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗಿದೆ.