ಮುಳ್ಳೇರಿಯ: ಚೆನ್ನೈಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅಖಿಲ ಭಾರತ ಅವಾರ್ಡಿ ಟೀಚರ್ಸ್ ಫೆಡರೇಶನ್ ಸಂಸ್ಥೆಯ ಕೇರಳ ಘಟಕವು ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಎಯುಪಿ ಶಾಲೆಯ ಸಂಸ್ಕøತ ಅಧ್ಯಾಪಕ ಪಿ.ಕೆ.ಗುರುವಾಯೂರಪ್ಪ ಭಟ್ ಅವರನ್ನು ಗುರುಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ರಾಜ್ಯದ 17 ಮಂದಿ ಅಧ್ಯಾಪಕರನ್ನು ಗುರುಶ್ರೇಷ್ಠ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಆ ಪೈಕಿ ಕನ್ನಡಿಗರಾದ ಪಿ.ಕೆ.ಗುರುವಾಯೂರಪ್ಪ ಭಟ್ ಅವರೂ ಒಬ್ಬರು. ಕ್ರೀಡೆ, ಶಿಕ್ಷಣ, ಸಮಾಜ ಸೇವೆ, ಸಂಸ್ಕøತಿ, ಪರಿಸರ ಸಂರಕ್ಷಣೆ ಮೊದಲಾದ ರಂಗಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವೇದ, ಸಂಸ್ಕøತ, ಜ್ಯೋತಿಷ್ಯ ಶಿರೋಮಣಿ, ಜ್ಯೋತಿಷ್ಯ ವಿಶಾರದ ಪಾಂಡಿತ್ಯವನ್ನು ಹೊಂದಿದ ಇವರು ಮುಳ್ಳೇರಿಯ ಎಯುಪಿ ಶಾಲೆಯಲ್ಲಿ ಕಳೆದ 30 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಕಳೆದ 10 ವರ್ಷಗಳಿಂದ ಸ್ಕೌಟ್ ಅಧ್ಯಾಪಕರಾಗಿಯೂ (ಹಿಮಾಲಯ ವುಡ್ ಬ್ಯಾಡ್ಜ್ ಹೋಲ್ಡರ್) ಸೇವೆ ಸಲ್ಲಿಸುತ್ತಿದ್ದು ಇದೇ ಮಾರ್ಚ್ ತಿಂಗಳಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರೂ ಆಗಿದ್ದಾರೆ.