ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ನಿರ್ಭಯಾ ಹತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಇಂದು ಪ್ರಕರಣದ ನಾಲ್ಕು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವಂತಿಲ್ಲ ಎಂದು ಹೇಳಿದೆ.
ಈ ಹಿಂದೆ ದೆಹಲಿ ಹೈಕೋರ್ಟ್ ಮಾರ್ಚ್ 3ಕ್ಕೆ ನಿರ್ಭಯಾ ಹತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಆದೇಶ ನೀಡಿತ್ತು. ಅದರಂತೆ ಇಂದು ಎಲ್ಲ ನಾಲ್ಕೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ದೆಹಲಿ ಕೋರ್ಟ್ ಇದೀಗ ಗಲ್ಲು ಶಿಕ್ಷೆ ಜಾರಿಗೆ ತಡೆಯಾಜ್ಞೆ ನೀಡಿದೆ. ಅಲ್ಲದೆ ಈ ಹಿಂದೆ ಹೊರಡಿಸಿದ್ದ ಡೆತ್ ವಾರೆಂಟ್ ಗೆ ತಡೆಯಾಜ್ಞೆ ನೀಡಿದ್ದು ಹೊಸದಾಗಿ ಡೆತ್ ವಾರಂಟ್ ಜಾರಿ ಮಾಡುವಂತೆ ಸೂಚಿಸಿದೆ.
ದೆಹಲಿ ಖೈದಿಗಳ ನಿಯಮಾವಳಿಗಳ ಪ್ರಕಾರ ಗಲ್ಲು ಶಿಕ್ಷೆಗೆ ಗುರಿಯಾದ ಯಾವುದೇ ಅಪರಾಧಿಯ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡರೆ ಅಪರಾಧಿಗೆ ಅಂದಿನಿಂದ 14 ದಿನಗಳ ಕಾಲ ಕಾಲಾವಕಾಶ ನೀಡಬೇಕು. ಇದೇ ಕಾರಣಕ್ಕೆ ನ್ಯಾಯಾಲಯ ಗಲ್ಲು ಶಿಕ್ಷೆ ಜಾರಿಯನ್ನು ತಡೆ ಹಿಡಿದಿದೆ ಎನ್ನಲಾಗುತ್ತಿದೆ.
ಅಲ್ಲದೆ ಅಪರಾಧಿ ಪವನ್ ಗುಪ್ತಾ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಿದ್ದು, ಈ ಕ್ಷಮಾದಾನ ಅರ್ಜಿಯ ಇತ್ಯರ್ಥವಾಗುವವರೆಗೂ ಗಲ್ಲು ಶಿಕ್ಷೆ ಜಾರಿಗೊಳಿಸಲು ಸಾಧ್ಯವಿಲ್ಲ ಎಂಬ ವಾದವೂ ಕೂಡ ಕೇಳಿಬರುತ್ತಿದೆ.