ಕುಂಬಳೆ: ಮನುಷ್ಯ ತನ್ನ ಬದುಕಿನಲ್ಲಿ ಪಿತೃ, ಬ್ರಹ್ಮ, ಭೂತ, ಋಷಿಯಜ್ಞ ಹಾಗೂ ದೈವ ಎಂಬ ಪಂಚ ಯಜ್ಞಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಧನೆಯನ್ನು ಮಾಡಿ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು. ಗುರು ಹಿರಿಯರು ತೋರಿಸಿಕೊಟ್ಟ ಸತ್ಪಥದಲ್ಲಿ ಸಾಗುವಂತಹ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ದೇವರ ಅನುಗ್ರಹದಿಂದ ಮಾತ್ರ ಸರ್ವವನ್ನೂ ಸಿದ್ಧಿಸಿಕೊಳ್ಳಲು ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಅಭಿಪ್ರಾಯಪಟ್ಟರು.
ನಾಯ್ಕಾಪು ಸಮೀಪದ ಮುಂಡಪಳ್ಳ(ದರ್ಬಾರ್‍ಕಟ್ಟೆ) ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಹೆತ್ತ ತಂದೆ ತಾಯಿಗಿಂತ ಮಿಗಿಲಾದ ದೇವರು ಮತ್ತೊಬ್ಬರಿಲ್ಲ. ಭಗೀರಥ ತನ್ನ ಕುಲದ ಉದ್ಧಾರಕ್ಕಾಗಿ ಗಂಗಾಮಾತೆಯನ್ನೇ ಧರೆಗಿಳಿಸಿದ ಮಹಾನ್ ಸಾಧಕ. ಅದೇ ರೀತಿಯಲ್ಲಿ ಗುರುಹಿರಿಯರ ಆಶೀರ್ವಾದದ ಫಲವಾಗಿ ಕೆ.ಕೆ.ಶೆಟ್ಟಿ ಅವರು ತಮ್ಮ ಹುಟ್ಟೂರಿನ ಜನತೆಗೆ ಸನ್ಮಂಗಲವನ್ನುಂಟು ಮಾಡಲು ಸರ್ವದೈವಾಂಶವೂ ಅಡಗಿರುವ ಶ್ರೀಚಕ್ರಾಂಕಿತೆ ರಾಜರಾಜೇಶ್ವರಿಯ ಭವ್ಯವಾದ ದೇಗುಲವನ್ನು ನಿರ್ಮಾಣ ಮಾಡುವ ಮಹಾತ್ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು. ಪುರಾಣಗಳನ್ನು ಸರಿಯಾಗಿ ಶ್ರವಣಮಾಡುವ ಮೂಲಕ ಅವುಗಳ ನಿಜಾರ್ಥವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಶ್ರೇಯಸ್ಸು ಸಾಧ್ಯ ಎಂದು ಅವರು ತಿಳಿಸಿದರು.
ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಎನ್. ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವರ ಮೇಲಿನ ಭಕ್ತಿಯಿಂದ ಮಾತ್ರ ನೆಮ್ಮದಿಯ ಜೀವನ ಸಾಧ್ಯ. ಕಷ್ಟದ ದಿನಗಳನ್ನು ಕೈ ಹಿಡಿದು ನಡೆಸುವವಳು ತಾಯಿ. ಆದ್ದರಿಂದ ಆಕೆಯ ಆರಾಧನೆಯಿಂದ ಒಳಿತಾಗುವುದು. ತನ್ನ ಜೀವನದ ಸುಂದರ ಕ್ಷಣ ಎಂದರೆ ಒಳ್ಳೆಯ ಹಿಂದೂವಾಗಿ ಹುಟ್ಟಿರುವುದು ಎಂದು ತಿಳಿಸಿದರು. ಸಂಪೂರ್ಣ ನಾಮಾವಶೇಷವಾದ ಕ್ಷೇತ್ರವೊಂದು ಅತ್ಯಪೂರ್ವವಾಗಿ ಪುನಃ ಪ್ರತಿಷ್ಠಾಪನೆಗೊಂಡಿರುವುದು ವಿಶೇಷವಾದುದು. ಹಿಂದೂ ಧರ್ಮದ ಶಕ್ತಿಯ ಪ್ರತೀಕ ಇದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್‍ಕುಮಾರ್ ರೈ ಮಾಲಾಡಿ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ನ್ಯಾಯವಾದಿ.ಬಾಲಕೃಷ್ಣ ಶೆಟ್ಟಿ ವಾನಂದೆ, ಕೆ.ರವೀಂದ್ರ ಆಳ್ವ ಕಿದೂರುಗುತ್ತು, ಕೊಡ್ಯಮೆ ಅರಮನೆಯ ಸುದರ್ಶನ ಬಲ್ಲಾಳ್,ಶ್ರೀಕ್ಷೇತ್ರದ ನಿರ್ಮಾತೃ ಕೆ.ಕೆ.ಶೆಟ್ಟಿ. ವಿನಯ ಕೆ.ಶೆಟ್ಟಿ, ಆಶಾ ಜ್ಯೋತಿ ರೈ ಮಾಲಾಡಿ ಉಪಸ್ಥಿತರಿದ್ದರು.
ಇದೇ ವೇಳೆ ಹಿರಿಯರಾದ ಶ್ರೀಧರ ಶೆಟ್ಟಿ ಹಾಗೂ ರತ್ನಾವತಿ ಶ್ರೀಧರ ಶೆಟ್ಟಿ ದಂಪತಿಗಳನ್ನು ಗೌರವಿಸಲಾಯಿತು. ಉಷಾ ಶಿವರಾಮ ಭಟ್ ಪ್ರಾರ್ಥನೆ ಹಾಡಿದರು. ನ್ಯಾ.ಬಿ.ಸುಬ್ಬಯ್ಯ ರೈ ಇಚ್ಲಂಪಾಡಿ ಸ್ವಾಗತಿಸಿ, ಶಿವರಾಮ ಆಳ್ವ ಕಾರಿಂಜ ವಂದಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರ್ವಹಿಸಿದರು.