ಪೆರ್ಲ: ವಿಶಿಷ್ಟ ಸಾಂಸ್ಕøತಿಕ ಹಿನ್ನೆಲೆಯಿರುವ ಯಕ್ಷಗಾನ ಇಂದು ವಿಶ್ವ ವ್ಯಾಪಕವಾಗಿ ಬೆಳೆದಿರುವುದು ಕರಾವಳಿ ಸಹಿತ ಸಮಗ್ರ ಕನ್ನಡ ನಾಡಿಗೆ ಹೆಮ್ಮೆಯಾಗಿದೆ. ಇಂದು ಯಕ್ಷಗಾನದ ಕಲಿಕೆಗೆ ಸಂಬಂಧಿಸಿ ಸಾಕಷ್ಟು ಅವಕಾಶಗಳು ಎಲ್ಲೆಡೆ ಲಭ್ಯವಿದೆ. ಆದರೆ ನಾಟ್ಯ, ಅಭಿನಯಗಳಿಗೆ ಸಂಬಂಧಿಸಿ ಏಕೀಕೃತ ವ್ಯವಸ್ಥೆಗಳಿಲ್ಲದಿರುವುದು ಶಾಸ್ತ್ರೀಯತೆಗೆ ಕಳಂಕವಾಗುತ್ತದೆ ಎಂದು ಹಿರಿಯ ಯಕ್ಷಗಾನ ಕಲಾವಿದ, ಖ್ಯಾತ ಅರ್ಥಧಾರಿ ಉಜಿರೆ ಅಶೋಕ ಭಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ನೇತೃತ್ವದಲ್ಲಿ ಪಡ್ರೆ ಚಂದು ಜನ್ಮ ಶತಮಾನೋತ್ಸವ ವಿಚಾರ ಸಂಕಿರಣ, ಸಂಸ್ಮರಣೆ, ನೂರರ ಅಭಿನಂದನೆ, ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಶನಿವಾರ ರಾತ್ರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದೊಂದಿಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾವಳಿಯಾದ್ಯಂತ ನೂರಾರು ಯಕ್ಷಗಾನ ಗುರುಗಳು ನಾಟ್ಯ, ಹಿಮ್ಮೇಳ ತರಗತಿಗಳನ್ನು ನಡೆಸುವ ಮೂಲಕ ಹೊಸ ತಲೆಮಾರಿನ ಸೃಷ್ಟಿಯಲ್ಲಿ ಬಹುದೊಡ್ಡ ಕೊಡುಗೆಗಳನ್ನು ನೀಡುತ್ತಿದ್ದಾರೆ. ಆದರೆ ಪ್ರತಿಯೊಬ್ಬರೂ ವಿಭಿನ್ನ ಆಯಾಮಗಳಲ್ಲಿ ತಮ್ಮದೇ ಶೈಲಿಯ ತರಗತಿಗಳನ್ನು ನಡೆಸುವುದರಿಂದ ಪ್ರಾದೇಶಿಕ ಭಿನ್ನತೆಗಳು ಕಂಡುಬರುತ್ತಿವೆ. ಇದರಿಂದಾಗಿ ಯಕ್ಷಗಾನದ ಒಟ್ಟು ಶಾಸ್ತ್ರೀಯತೆಗೆ ಸಮಸ್ಯೆಯಾಗುವ ಜೊತೆಗೆ ಪರಂರೆಯನ್ನು ಗುರುತಿಸುವಲ್ಲಿ ತೊಡಕುಗಳಾಗುವ ಭೀತಿ ಎದುರಾಗಿದೆ ಎಂದು ಅವರು ಕಳಕಳಿ ವ್ಯಕ್ತಪಡಿಸಿದರು. ಯಕ್ಷಗಾನದಂತಹ ಸರ್ವಾಂಗೀಣ ಕಲೆ ವಿಶ್ವ ವ್ಯಾಪಕಗೊಂಡಿರುವ ವರ್ತಮಾನದ ಕಾಲಘಟ್ಟದಲ್ಲಿ ಅದರ ಪ್ರತಿಯೊಂದು ಕೋನಗಳಲ್ಲೂ ನಿಖರತೆಯನ್ನು ಕಂಡುಕೊಳ್ಳುವ ನಿಟ್ಟಿನ ತುರ್ತುಗಳನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ತೆಂಕುತಿಟ್ಟಿನ ಇಂದಿನ ಪ್ರಾಥಿನಿಧಿಕ ನಾಟ್ಯಕೇಂದ್ರವಾಗಿ ಗರಿಮೆಗೆ ಪಾತ್ರವಾಗಿರುವ ಪೆರ್ಲದ ಪಡ್ರೆಚಂದು ಸ್ಮಾರಕ ಕೇಂದ್ರದ ಸರ್ವಾಂಗೀಣ ಏಳ್ಗೆಗೆ ಪ್ರತಿಯೊಬ್ಬ ಕಲಾವಿದ, ಕಲಾಪ್ರೇಮಿ ಕೈಜೋಡಿಸುವುದು ಅಗತ್ಯ ಎಂದರು.
ನಿವೃತ್ತ ಅಧ್ಯಾಪಕ, ಯಕ್ಷಗಾನ ಕಲಾವಿದ ಎಸ್.ಬಿ.ನರೇಂದ್ರಕುಮಾರ್ ಧರ್ಮಸ್ಥಳ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷಗಾನದ ತಲಸ್ಪರ್ಶಿ ಅಧ್ಯಯನ, ಅಭ್ಯಾಸಗಳಿಲ್ಲದೆ ಶ್ರೇಷ್ಠ ಕಲಾವಿದನಾಗಿ ಮೂಡಿಬರಲು ಸಾಧ್ಯವಾಗದು. ಸಮರ್ಥ ಗುರುವಿನಿಂದ ದೊರಕುವ ಮಾರ್ಗದರ್ಶನದಿಂದಷ್ಟೇ ಕಲಾವಿದ ನಿಪುಣತೆ ಹೊಂದಿ ರಂಗದಲ್ಲಿ ಧೀರ್ಘಕಾಲ ಬೇಡಿಕೆಯವನಾಗಿ ಸಾರ್ಥಕತೆ ಪಡೆಯಬಲ್ಲ. ಈ ಹಿನ್ನೆಲೆಯಲ್ಲಿ ಬೆಳೆದುಬಂದಿರುವ ವಿಶಾಲ ಗುರುಪರಂಪರೆಯನ್ನು ಅನುಸರಿಸಿ, ಸೃಜನಾತ್ಮಕತೆಯಿಂದ ಅನುಕರಿಸುವ ಮನೋಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದರು.
ಈ ಸಂದರ್ಭ ನಡೆದ 'ಯಕ್ಷಗಾನ ಕಲಾವಿದರಾಗಿ ಪಡ್ರೆ ಚಂದು', 'ಯಕ್ಷಗಾನ ಗುರುಗಳಾಗಿ ಪಡ್ರೆ ಚಂದು' ವಿಚಾರ ಸಂಕಿರಣಗಳಲ್ಲಿ ಹಿರಿಯ ಕಲಾವಿದ, ಅರ್ಥದಾರಿ ಕೋಟೆ ರಾಮಭಟ್, ಉಮೇಶ ಶೆಟ್ಟಿ ಉಬರಡ್ಕ ಅವರು ವಿಚಾರ ಮಂಡಿಸಿ ಮಾತನಾಡಿದರು. ಪ್ರಸಿದ್ಧ ಅರ್ಥಧಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಧಾಕೃಷ್ಣ ಕಲ್ಚಾರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ, ಯೋಗೀಶ್ ರಾವ್ ಚಿಗುರುಪಾದೆ, ಆರತಿ ಪಟ್ರಮೆ, ಸ್ವರ್ಗ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು.
ಬಳಿಕ ಪಡ್ರೆ ಚಂದು ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರದಾನ, ಭಾವಚಿತ್ರ ಅನಾವರಣ ಹಾಗೂ ಸಮಾರೋಪ ಸಮಾರಂಭ ನಡೆಯಿತು.ಎಸ್.ಬಿ.ನರೇಂದ್ರ ಕುಮಾರ್ ಧರ್ಮಸ್ಥಳ ಅಧ್ಯಕ್ಷತೆ ವಹಿಸಿದರು. ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ ಆಶೀರ್ವಚನ ನೀಡಿದರು. ಚಂದ್ರಶೇಖರ ದಾಮ್ಲೆ, ಡಾ.ಮೋಹನದಾಸ ರೈ ಬಳ್ಳೂರು, ಆದರ್ಶ ಚೊಕ್ಕಾಡಿ, ಎಸ್.ನಿತ್ಯಾನಂದ ಪಡ್ರೆ, ರವಿ ಅಲೆವೂರಾಯ, ಎಂ.ನಾ.ಚಂಬಲ್ತಿಮಾರ್ ಉಪಸ್ಥಿತರಿದ್ದರು. ವಿವೇಕಾನಂದ ಕಾಲೇಜು ಉಪನ್ಯಾಸಕ ವಿ.ಜಿ.ಭಟ್ 'ಪಡ್ರೆ ಚಂದು' ಭಾವಚಿತ್ರ ಅನಾವರಣ ಗೊಳಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಚೇವಾರು ಶಂಕರ ಕಾಮತ್ ಹಿರಿಯ ಮದ್ದಳೆಗಾರ ರಾಮಕೃಷ್ಣ ಕಾಮತ್ ಅವರ ಭಾವಚಿತ್ರ ಅನಾವರಣ ಗೊಳಿಸಿದರು. ಆಟ-ಕೂಟಗಳ ಮಾತಿನ ಚತುರ, ಸುಪ್ರಸಿದ್ಧ ಕಲಾವಿದ ಕುಂಬಳೆ ಸುಂದರರಾವ್ ಅವರಿಗೆ ಪಡ್ರೆ ಚಂದು ಶತಮಾನೋತ್ಸವ ಪ್ರಶಸ್ತಿ, ಪಡ್ರೆ ಚಂದು ಅವರ ಶಿಷ್ಯ, ಬಣ್ಣದ ವೇಷಗಳ ಬಿನ್ನಾಣಗಾರ, ಹನುಮಗಿರಿ ಮೇಳದ ಖ್ಯಾತ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ವಷರ್ಂಪ್ರತಿ ನೀಡಲಾಗುವ ಪಡ್ರೆ ಚಂದು ಪ್ರಶಸ್ತಿ, ಪಡ್ರೆ ಚಂದು ಅವರ ಪ್ರಥಮ ಪುತ್ರ, ಕಟೀಲು ಮೇಳದ ಹಿರಿಯ ಕಲಾವಿದ ಪಡ್ರೆ ಕುಮಾರ ಅವರಿಗೆ ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರದ ವತಿಯಿಂದ ನೀಡಲಾಗುವ 'ಅಡ್ಕಸ್ಥಳ ಪ್ರಶಸ್ತಿ', ತೆಂಕುತಿಟ್ಟಿನ ಸೃಜನಶೀಲ ಹಾಸ್ಯಗಾರ, ಪ್ರಸ್ತುತ ಕಟೀಲು ಮೇಳದಲ್ಲಿರುವ ಗಡಿನಾಡು ಕಾಸರಗೋಡಿನ ಅಭಿಜಾತ ಪ್ರತಿಭೆ, ಖ್ಯಾತ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ ಅವರಿಗೆ ಪಡ್ರೆ ಚಂದು ಜನ್ಮ ಶತಮಾನೋತ್ಸವ ಅಭಿನಂದನಾ ಸನ್ಮಾನ, ನಿವೃತ್ತ ಶಿಕ್ಷಕ, ಮದ್ದಳೆಗಾರ ಪದ್ಮನಾಭ ರಾವ್ ಅವರಿಗೆ ಗುರುವಂದನೆ, ಲೇಖಕ ಪ. ರಾಮಕೃಷ್ಣ ಶಾಸ್ತ್ರಿ ಅವರಿಗೆ ವಿಶೇಷ ಪ್ರಶಸ್ತಿ, ಪ್ರಸಾದನ ಕಲಾವಿದ ನಾರಾಯಣ ಸಜಂಕಿಲ ಅವರಿಗೆ ಇದೇ ಮೊದಲ ಬಾರಿ ನೀಡಲಾಗುವ 'ದೇವಕಾನ ಕೃಷ್ಣ ಭಟ್ ಪ್ರಶಸ್ತಿ', ವೇ.ಮೂ.ಪಳ್ಳತ್ತಡ್ಕ ಪರಮೇಶ್ವರ ಭಟ್ ಅವರಿಗೆ ಪುರೋಹಿತ ರತ್ನ ಪ್ರಶಸ್ತಿ ಪ್ರದಾನ ನಡೆಯಿತು. ಬಣ್ಣದ ವೇಷಧಾರಿ ರಾಧಾಕೃಷ್ಣ ಮಾಸ್ತರ್ ಪೈವಳಿಕೆ ದೇವಕಾನ ಕೃಷ್ಣ ಭಟ್ ಅವರ ಸಂಸ್ಮರಣಾ ಭಾಷಣ ಮಾಡಿದರು. ಗೋಪಾಲಕೃಷ್ಣ ಕಾನ, ಶ್ರೀಕೃಷ್ಣ ದೇವಕಾನ ಉಪಸ್ಥಿತರಿದ್ದರು. ಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರದ ನಿರ್ದೇಶಕ, ಗುರು ಸಬ್ಬಣಕೋಡಿ ರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕೇಂದ್ರದ ವಿದ್ಯಾರ್ಥಿಗಳಿಂದ ಪೂರ್ವರಂಗ, ರಂಗಪ್ರವೇಶದ ವಿದ್ಯಾರ್ಥಿಗಳಿಂದ 'ಪಾಂಡವಾಶ್ವಮೇಧ' 'ಬಿಲ್ಲ ಹಬ್ಬ', 'ಕುಶ-ಲವ', ಕೇಂದ್ರದ ವಿದ್ಯಾರ್ಥಿಗಳಿಂದ 'ಗಿರಿಜಾ ಕಲ್ಯಾಣ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.