ಮಂಜೇಶ್ವರ: ಕವಿತೆಗಳು ಮನಸು ಅರಳಿಸುವಂತಿರಬೇಕು. ಮನಸ್ಸು ಕೆರಳಿಸುವ ಕವಿತೆಗಳು ನಮಗೆ ಬೇಕಾಗಿಲ್ಲ. ಆ ನಿಟ್ಟಿನಲ್ಲಿ ಕವಿ ತಮ್ಮ ಭಾವಗಳನ್ನು ಬದಲಾಯಿಸಬೇಕು ಎಂದು ಖ್ಯಾತ ಚುಟುಕು ಸಾಹಿತಿ ಹ.ಸು.ಒಡ್ಡಂಬೆಟ್ಟು ಅವರು ಅಭಿಪ್ರಾಯ ಪಟ್ಟರು. ಕವಿಗಳು ಇತರರಿಗೆ ಮಾದರಿಯಾಗಿರಬೇಕು. ಸಮಾಜದ ಎಲ್ಲರೂ ಸಾಹಿತಿ ಕವಿಗಳ ನಡೆ ನುಡಿಗಳನ್ನು ಗಮನಿಸುತ್ತಿರುತ್ತಾರೆ. ಖ್ಯಾತಿಯನ್ನು ಗಳಿಸುವ ಭರದಲ್ಲಿ ನಮ್ಮ ಬರವಣಿಗೆಯ ಮತ್ತು ಹೇಳಿಕೆಗಳ ಬಗ್ಗೆ ನಮಗೆ ಜ್ಞಾನ ಸದಾ ಇರಬೇಕು ಎಂದು ಅವರು ನಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.
ಮಂಗಳೂರು ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಡೆದ ವಸಂತ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ ಅವರು ಕವಿಗೋಷ್ಠಿ ಕೇವಲ ಕವಿಗಳ ಭೌತಿಕ ಮಿಲನವಷ್ಟೇ ಅಲ್ಲ ಅದು ಅವರ ಕವಿ ಮನಸ್ಸಿನ ಭಾವಗಳ ಸಂವಹನೆಗೂ ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ನೆರವೇರಿಸಿದರು. ಕವಿಗೋಷ್ಠಿಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತಾರನಾಥ ಬೋಳಾರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಚು.ಸಾ.ಪದ ತಾಲೂಕು ಅಧ್ಯಕ್ಷರಾದ ರೇಮಂಡ್ ಡಿ'ಕುನ್ಹಾ ಮತ್ತು ನಿರ್ಗಮಿತ ಅಧ್ಯಕ್ಷರಾದ ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಸುಮಾರು 25 ಕವಿಗಳು ತಮ್ಮ ಕವನವನ್ನು ವಾಚಿಸಿದರು. ಖ್ಯಾತ ಕವಿಗಳಾದ ರವೀಂದ್ರನ್ ಪಾಡಿ ಮಳಯಾಳ ಕವಿತೆ ಪ್ರಸ್ತುತ ಪಡಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು.