ಬದಿಯಡ್ಕ: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತ್ತಕೋತ್ತರ ಪರೀಕ್ಷೆಯ ವಿವಿಧ ವಿಭಾಗಗಳಲ್ಲಿ ಗಡಿನಾಡು ಕಾಸರಗೋಡಿಗೆ ಮೂರು ಪ್ರಥಮ ರ್ಯಾಂಕ್ ಲಭಿಸಿದ್ದು, ಜಿಲ್ಲೆಗೆ ಅಭಿಮಾನ ಸಂಭ್ರಮವಾಗಿದೆ. ಎಂ.ಎ ರಾಜಕೀಯ ಸಯನ್ಸ್, ಎಂ.ಎಸ್ಸಿ ಪರಿಸರ ಶಾಸ್ತ್ರ ಹಾಗೂ ಪ್ರಾಣಿಶಾಸ್ತ್ರ ವಿಭಾಗದ ಪ್ರಥಮ ರ್ಯಾಂಕ್‍ಗಳು ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿನಿಯರ ಪಾಲಾಗಿದೆ.ಈ ಪೈಕಿ ಇಬ್ಬರು ಕನ್ನಡಿಗರೆಂಬುದು ಹೆಮ್ಮೆಯ ಸಂಗತಿ.
ರ್ಯಾಂಕ್ ಪಡೆದ ಮೂವರು ವಿದ್ಯಾರ್ಥಿನಿಯರೂ ಬಡಕುಟುಂಬದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದವರು. ಹೊಟೇಲು ಕಾರ್ಮಿಕನ ಮಗಳು, ಪಾನ್ ವಾಲಾನ ಮಗಳು, ತರಕಾರಿ ವ್ಯಾಪಾರಿಯ ಮಗಳು.. ಹೀಗೇ ಅವಿರತ ಪರಿಶ್ರಮದಿಂದ ಕಲಿತು ಆನನ್ಯ ಸಾಧನೆಯನ್ನು ಮಾಡಿದ ಈ ಕುವರಿಯರು ಇಡೀ ಕಾಸರಗೋಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಉಪ್ಪಳದ ಪೂಜಾಶ್ರೀ:
ಉಪ್ಪಳ ಗೇಟ್ ಸಮೀಪದ ಭಂಡಾರ ಮನೆಯ ನಾರಾಯಣ - ಉಮಾವತಿ ದಂಪತಿಯ ಪ್ರಥಮ ಪುತ್ರಿ ಪೂಜಾಶ್ರೀ ಮಂಗಳೂರು ವಿಶ್ವವಿದ್ಯಾನಿಲಯದ ಪೆÇಲಿಟಿಕಲ್ ಸಯನ್ಸ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಿಟ್ಟಿಸಿದ ಕನ್ನಡತಿ. ಸರ್ಕಾರ ನೀಡಿದ ಲೈಫ್ ಮಿಶನ್ ಯೋಜನೆಯಲ್ಲಿ ದೊರೆತ ಪುಟ್ಟ ಮನೆಯಲ್ಲಿ ಜೀವಿಸುವ ಪೂಜಾಶ್ರೀ ಬಡಕುಟುಂಬದ ಹುಡುಗಿ. ತಂದೆ ನಾರಾಯಣರು ಹೊಟೇಲ್ ಕಾರ್ಮಿಕರಾಗಿದ್ದು, ಇವರ ದುಡಿಮೆಯೇ ಕುಟುಂಬದ ಜೀವನ ಮಾರ್ಗ. ಉಪ್ಪಳ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದ ಪೂಜಾಶ್ರೀ ಮಂಗಳೂರು ರಥಬೀದಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ವ್ಯಾಸಂಗವನ್ನು ಪೂರೈಸಿ ಬಳಿಕ ಮಂಗಳೂರು ವಿಶ್ವವಿದ್ಯಾವಿದ್ಯಾನಿಲಯದಲ್ಲಿ ಎಂ.ಎ.ರಾಜಕೀಯ ಶಾಸ್ತ್ರಕ್ಕೆ ಸೇರ್ಪಡೆಗೊಂಡು ಇದೀಗ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 79.6ಅಂಕ ಪಡೆದು ಪ್ರಥಮ ರ್ಯಾಂಕ್ ಗಿಟ್ಟಿಸಿ ಅಚ್ಚರಿ ಮೂಡಿಸಿದ್ದಾಳೆ.
ಬಡ ಕುಟುಂಬದ ಪೂಜಾಶ್ರೀ ಪ್ರತಿನಿತ್ಯ ರೈಲಿನಲ್ಲಿ ಕಾಲೇಜಿಗೆ ತೆರಳುತ್ತಿದ್ದು, ಎಳವೆಯಿಂದಲೇ ಕಲಿಕೆಯಲ್ಲಿ ಮುಂದಿದ್ದಳು. ಕಠಿನ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಯಿತು ಎಂದು ಆನಂದ ಭಾಷ್ಪ ಸುರಿಸುವ ಪೂಜಾಶ್ರೀ ಟೀಚರ್ ಆಗಬೇಕೆಂಬ ಕನಸನ್ನು ಹೊಂದಿದ್ದಾಳೆ. ಈಕೆಯ ಸಹೋದರಿ ಜ್ಯೋತಿ ಪ್ಲಸ್ ಟು ತೇರ್ಗಡೆಯಾಗಿದ್ದು, ಮುಂದಿನ ವ್ಯಾಸಂಗಕ್ಕೆ ಅಣಿಯಾಗುತ್ತಿದ್ದಾಳೆ.
ಪಟ್ಟತ್ತಮೊಗರಿನ ಮಂಶೀದಾ:
ಮೀಂಜ ಗ್ರಾಮ ಪಂಚಾಯತಿನ ಮೂಡಂಬೈಲಿನ ಮಹ್‍ಶೂದತ್ ಮಂಶೀದಾ ಮಂಗಳೂರು ವಿಶ್ವವಿದ್ಯಾನಿಲಯದ ಎಂಎಸ್‍ಸಿ ಪರಿಸರ ಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಇನ್ನೋರ್ವ ಪ್ರತಿಭಾವಂತೆ. ಉಪ್ಪಳ ನಯಾಬಝಾರಿನ ಪಾನ್ ವಾಲಾನ ಪುತ್ರಿ ಈಕೆ. ಕಳೆದ 10 ವರ್ಷಗಳಿಂದ ಪಾನ್ ಅಂಗಡಿ ನಡೆಸುತ್ತಿರುವ ಪಟ್ಟತ್ತಮೊಗರಿನ ಮಹಮೂದ್ ಇದೀಗ ಕುಂಬಳೆ ರೈಲ್ವೇ ನಿಲ್ದಾಣ ಮುಂಭಾಗದ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದು, ಪತ್ನಿ ಮೈಮೂನ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬಡತನದ ಬೇಗೆಯಲ್ಲಿ ಬದುಕುತ್ತಿರುವ ಈ ಕುಟುಂಬಕ್ಕೆ ಪಾನ್ ಅಂಗಡಿಯಲ್ಲಿ ನಿತ್ಯ ದೊರೆಯುವ ಆದಾಯವೇ ಜೀವನಾಧಾರ. ಬಡತನವಿದ್ದರೂ ತನ್ನ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಿದ ಮಹಮೂದರ ಚಿಂತನೆ ಶ್ಲಾಘನೀಯ. ಇನ್ನೋರ್ವ ಪುತ್ರ ಆಹಮದ್ ದಿಲ್‍ಶಾದ್ ಇಂಜಿನಿಯರಿಂಗ್ ಡಿಪೆÇ್ಲಮ ಪೂರ್ತಿಗೊಳಿಸಿದ್ದಾನೆ.
ಮಹ್‍ಶೂದತ್ ಮಂಶೀದಾ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಬಳಿಕ ಕುಂಬಳೆ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆದಳು. ಮಂಗಳೂರು ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪದವಿ ಪೂರೈಸಿ, ಬಳಿಕ ಕೋಣಾಜೆ ಮಂಗಳ ಗಂಗೋತ್ರಿಯಲ್ಲಿ ಸ್ನಾತ್ತಕೋತ್ತರ ವ್ಯಾಸಂಗಕ್ಕೆ ಸೇರ್ಪಡೆಗೊಂಡು ಇದೀಗ ಅಂತಿಮ ಪರೀಕ್ಷೆಯಲ್ಲಿ ರಾಜಕೀಯ ಶಾಸ್ತ್ರ ವಿಭಾಗದಲ್ಲಿ ಶೇಕಡಾ 89.8 ಅಂಕ ಪಡೆದು ಪ್ರಥಮ ರ್ಯಾಂಕ್ ಗಿಟ್ಟಿಸಿ ಬೇಷ್ ಎನಿಸಿಕೊಂಡಿದ್ದಾಳೆ. ತಾಯಿ ಅನಾರೋಗ್ಯಕ್ಕಿಡಾಗಿ ಹಾಸಿಗೆ ಹಿಡಿದಿದ್ದು, ಈ ಸಂದರ್ಭದಲ್ಲಿ ಮನೆಯ ಎಲ್ಲಾ ಕೆಲಸಗಳನ್ನು ಪೂರ್ತಿಗೊಳಿಸಿ ರೈಲಿನ ಮೂಲಕ ಕಾಲೇಜಿಗೆ ತೆರಳುತ್ತಿದ್ದ ಮಂಶೀದಾ ಬಡತನದ ಬೇಗೆಯಲ್ಲಿ ಬೆಳೆದ ಕುವರಿ. ಕಠಿನ ಪರಿಶ್ರಮಪಟ್ಟು ಓದಿ ರ್ಯಾಂಕ್ ಗಿಟ್ಟಿಸಿ ಚಿನ್ನದ ಪದಕ ಪಡೆದ ಈಕೆಗೆ ಪಿಎಚ್‍ಡಿ ಮಾಡಬೇಕೆಂಬ ಮಹದಾಸೆಯಿದೆ.
ಅಗಲ್ಪಾಡಿಯ ಶೋಭಿತಾ:
ಬದಿಯಡ್ಕ ಸಮೀಪದ ಮಾರ್ಪನಡ್ಕದ ತರಕಾರಿ ವ್ಯಾಪಾರಿ ಅಚ್ಯುತ ಮಣಿಯಾಣಿ ಪದ್ಮಾರ್ - ಹೇಮಲತಾ ದಂಪತಿಯ ಪುತ್ರಿ ಶೋಭಿತಾ ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ನೊಂದಿಗೆ ಎರಡು ಚಿನ್ನದ ಪದಕ ಗಿಟ್ಟಿಸಿ ಇಡೀ ನಾಡಿಗೆ ಅಭಿಮಾನವಾಗಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಅಗಲ್ಪಾಡಿ ಶ್ರಿ ಅನ್ನಪೂರ್ಣೆಶ್ವರಿ ಶಾಲೆಯಲ್ಲಿ ಪೂರೈಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್‍ಸಿ ಪದವಿ ಪಡೆದಿದ್ದಾಳೆ. ಬಳಿಕ ಮಂಗಳೂರಿನ ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದಲ್ಲಿ 8.3 ಗ್ರೇಡ್ ಅಂಕ ಪಡೆದು. ಪ್ರಥಮ ರ್ಯಾಂಕ್ ಗಿಟ್ಟಿಸಿದ್ದು . ಇದೀಗ ಮಂಗಳೂರಿನ ಹಂಪನಕಟ್ಟೆಯ ಸರ್ಕಾರಿ ಶಿಕ್ಷಕರ ತರಬೇತಿ ಮಹಾವಿದ್ಯಾಲಯದಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿರುವ ಶೋಭಿತಾ ಉಪನ್ಯಾಸಕಿಯಾಗುವ ಆಕಾಂಕ್ಷೆ ಹೊಂದಿದ್ದಾಳೆ.
ಕೊಣಾಜೆ ಹಾಸ್ಟೆಲ್‍ನಲ್ಲಿ ತಂಗಿ ಅಲ್ಲಿಂದಲೇ ಕಾಲೇಜೆಗೆ ತೆರಳುತ್ತಿದ್ದ ಶೋಭಿತಾ ಚಿಕ್ಕಂದಿನಲ್ಲಿಯೇ ಕಲಿಕೆಯಲ್ಲಿ ಮುಂದಿದ್ದಳು. ಶೋಭಿತಾಳ ಸಹೋದರ ಸುಧೀರ್ ಕೃಷ್ಣ ಪದವಿ ಪೂರೈಸಿ ಬೆಂಗಳೂರಿನಲ್ಲಿ ವೆಬ್ ಡಿಸೈನಿಂಗ್ ವೃತ್ತಿಯಲ್ಲಿದ್ದಾನೆ. ಭವಿಷ್ಯದಲ್ಲಿ ಪಿಎಚ್‍ಡಿ ಮಾಡಬೇಕೆಂಬ ಇರಾದೆಯೂ ಶೋಭಿತಾಳಿಗಿದೆ.