ಪೆರ್ಲ:ವಿಶ್ವವೇ ಮಾನ್ಯತೆ ನೀಡಿದ ಸನಾತನ ಹಾಗೂ ಅವಿನಾಶಿ ಹಿಂದು ಧರ್ಮ ವಿಶ್ವಕ್ಕೆ ಬದುಕುವ ಕಲೆಯನ್ನು ಕಾಣಿಕೆಯಾಗಿ ನೀಡಿದೆ. ಧರ್ಮ ಉಳಿದಲ್ಲಿ ದೇಶ ಹಾಗೂ ದೇಶ ಉಳಿದಲ್ಲಿ ನಾವು ಉಳಿಯಬಲ್ಲೆವು. ಧರ್ಮ ಹಾಗೂ ದೇಶದ ಬಗ್ಗೆ ಕಾಳಜಿ ಹೊಂದಿರಬೇಕು. ಧರ್ಮ ಜಾಗೃತಿಯೊಂದಿಗೆ ದೇಶದ ಬಗ್ಗೆ ಸದಾ ಚಿಂತನೆ ನಡೆಸಬೇಕು ಎಂದು ಕರಿಂಜ ಶ್ರೀ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ ಮತ್ತು ಶ್ರೀ ಸುಬಹ್ಮಣ್ಯೇಶ್ವರ ಪ್ರಸಾದಿತ ಭಜನಾ ಸಂಘ ಕಾಟುಕುಕ್ಕೆ ಆಶ್ರಯದಲ್ಲಿ ಭಜನಾ ಸಂಘದ 75ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಜಗತ್ತಿನ ಎಲ್ಲ ಧರ್ಮಗಳೂ ಒಪ್ಪುವ ಸಾರ್ವಕಾಲಿಕ ಸತ್ಯ ಎಂದರೆ ಸರ್ವಶಕ್ತ ಹಾಗೂ ಸರ್ವವ್ಯಾಪ್ತನಾದ ಭಗವಂತನ ಅಸ್ತಿತ್ವ.ಪರಮಾತ್ಮನ ದರ್ಶನ ತಾರ್ಕಿಕ ವಿಚಾರಧಾರೆಯಿಂದ ವಿಮುಕ್ತವಾದ, ಕಲ್ಪನೆಗೆ ನಿಲುಕದ ಒಂದು ಆತ್ಮಾನುಭವ. ಭಗವಂತ ಮತ್ತು ಭಕ್ತರ ನಡುವಿನ ಸಂಬಂಧ ತಾಯಿ ಮಗುವಿನ ಸಂಬಂಧದಂತೆ ಎಂದವರು ತಿಳಿಸಿದರು. ಭಜನೆ ಎಂಬುದು ಭಗವಂತ ಮತ್ತು ಭಕ್ತರ ನಡುವಿನ ಸಂವಹನ ಮಾಧ್ಯಮ.ವೇದಜ್ಞಾನದ ಮುಂದುವರಿದ ಭಾಗ ದಾಸ ಸಂಕೀರ್ತನಯಲ್ಲಿ ಜೀವನವನ್ನು ಆನಂದಮಯವಾಗಿ ಪರಿವರ್ತಿಸುವ ವಿಚಾರಧಾರೆಗಳು, ಬದುಕುವ ಮಾರ್ಗ ಹಾಗೂ ಬದುಕಿಗೆ ಪೂರಕವಾಗುವ ಆಂಶಗಳನ್ನು ಎಳೆ ಎಳೆಯಾಗಿ ವಿವರಿಸಲಾಗಿದೆ. ಸಾಹಿತ್ಯ ಪ್ರಕಾರಗಳು ಚಿರ ಉತ್ಸಾಹ, ಸಂತೋಷದಿಂದ ಬಾಳುವ ಗೊತ್ತು ಗುರಿಯನ್ನು ರೂಪಿಸಿ ರಚಿಸಲಾದ ಭಾಷ್ಯಗಳು ಎಂದರು.
ಕಾಟುಕುಕ್ಕೆ ದೇವಳದ ಮಾಜಿ ಆಡಳಿತ ಮೊಕ್ತಸರ ಸಚ್ಚಿದಾನಂದ ಖಂಡೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಚೇತನಾ ಎಂ., ಕೃಷ್ಣಪ್ರಸಾದ ರೈ ಪೆರಡಾಲ, ಜಗನ್ನಾಥ ರೈ ಪೆರಡಾಲಗುತ್ತು, ಭಜನಾ ಪರಿಷತ್ತು ಅಧ್ಯಕ್ಷ ಬಾಲಕೃಷ್ಣ ಪಂಜ, ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ ಉಪಸ್ಥಿತರಿದ್ದರು.
ಭಜನಾ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ ಮಾಯಿಲಂಗಿ ಸ್ವಾಗತಿಸಿ, ಕಾರ್ಯದರ್ಶಿ ರಾಮಚಂದ್ರ ಮಣಿಯಾಣಿ ವಂದಿಸಿದರು. ವಾಣಿ ಜಿ.ಶೆಟ್ಟಿ ನಿರೂಪಿಸಿದರು. ಮಂಗಳವಾರ ಬೆಳಗ್ಗೆ 7.50ಕ್ಕೆ ಉಷಾಪೂಜೆ,11ಕ್ಕೆ ನಡೆದ ಧಾರ್ಮಿಕ ಸಭೆಯಲ್ಲಿ ಕೊಂಡೆವೂರು ಶ್ರೀ ಕ್ಷೇತ್ರದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾಟುಕುಕ್ಕೆ ದೇವಳದ ಮಾಜಿ ಆಡಳಿತ ಮೊಕ್ತಸರ ವಿಷ್ಣುಪ್ರಸಾದ್ ಪಿಲಿಂಗಲ್ಲು ಅಧ್ಯಕ್ಷತೆ ವಹಿಸಿದ್ದರು.