ಕುಂಬಳೆ: ಆರಿಕ್ಕಾಡಿ ಕಾರ್ಳೆ ಶ್ರೀಕಾಳಿಕಾಂಬಾ ಕ್ಷೇತ್ರದ ಅಷ್ಟಬಂಧ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಇಂದಿನಿಂದ(ಶುಕ್ರವಾರ)ಆರಂಭಗೊಂಡು ಮಾ.12ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ ಪ್ರಧಾನ ಆಚಾರ್ಯರ ಆಗಮನ, ಆಚಾರ್ಯವರಣ, ಶ್ರೀದೇವರ ಸನ್ನಧಿಯಲ್ಲಿ ಫಲಾನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಶ್ರೀಗುರು ಮಹಾಗಣಪತಿ ಪೂಜೆ, ಪುಣ್ಯಾಹವಾಚನ, ಮಾತೃಕ ನಾಂದಿ ಸ್ಥಾಪನೆ, ಕೌತುಕ ಬಂಧನ, ನವಗ್ರಹ ಪೂಜೆ, ಅಂಕುರಾರೋಹಣ ವಿಧಿವಿಧಾನಗಳು ಪುರೋಹಿತ ಕೆ.ರಾಮಕೃಷ್ಣ ಆಚಾರ್ಯರ ನೇತೃತ್ವದಲ್ಲಿ ನಡೆಯಿತು. ಅಪರಾಹ್ನ ಕುಂಬಳೆ ಕೃಷ್ಣನಗರದ ಮೌನೇಶ ಮಂದಿರ ಪರಿಸರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆರಿಕ್ಕಾಡಿಗೆ ಆಗಮಿಸಿತು. ಸಂಜೆ 6.30ಕ್ಕೆ ಉಗ್ರಾಣ ಮುಹೂರ್ತ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರ ಬಲಿ, ಸುದರ್ಶನ ಹೋಮ, ಪ್ರಾಸಾದ ಶುದ್ದಿ ಮೊದಲಾದ ವಿಧಿವಿಧಾನಗಳು ನೆರವೇರಿದವು.
ಇಂದಿನ ಕಾರ್ಯಕ್ರಮ:
ಶುಕ್ರವಾರ ಬೆಳಿಗ್ಗೆ 7 ರಿಂದ ಶ್ರೀಗುರುಮಹಾಗಣಪತಿ ಪೂಜೆ, ಪುಣ್ಯಾಹ ವಾಚನ, ನಾಂದಿಪೂಜೆ, ಅಂಕುರಪೂಜೆ, ನವಗ್ರಹ ಪೂಜೆ, ಮಹಾಗಣಪತಿಹೋಮ, ಶ್ರೀದೇವರ ಉಷಃಪೂಜೆ ನಡೆಯಲಿದೆ. 10ಕ್ಕೆ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳಿಗೆ ಪೂರ್ಣಕುಂಭ ಸ್ವಾಗತ, ಮಧ್ಯಾಹ್ನ 12.30ಕ್ಕೆ ಶ್ರೀದೇವರ ಪೂಜೆ, ಸಂಜೆ 6.30ಕ್ಕೆ ಯಾಗಮಂಟಪ ಪ್ರವೇಶ, ಮಂಟಪ ಸಂಸ್ಕಾರ, ವಾಸ್ತು ರಾಕ್ಷೋಘ್ನಾದಿ ಹೋಮಾದಿಗಳು ನಡೆಯಲಿವೆ. ವಿವಿಧ ಭಜನಾ ತಮಡಗಳಿಂದ ಬೆಳಿಗ್ಗೆ 8 ರಿಂದ ಭಜನಾ ಸಂಕೀರ್ತನೆ ರಾತ್ರಿ 8ರ ವರೆಗೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1ರಿಂದ ಕಲಾರತ್ನ ಶಂ.ನಾ ಅಡಿಗ ಕುಂಬಳೆ ಅವರ ಶಿಷ್ಯವೃಂದದಿಂದ ಹರಿಕಥಾ ಸಂಕೀರ್ತನಾ ಸತ್ಸಂಗ ನಡೆಯಲಿದೆ. ಸಂಜೆ 7 ರಿಂದ ನೃತ್ಯೋತ್ಸವ ನಡೆಯಲಿದೆ. ಅಪರಾಹ್ನ 3ಕ್ಕೆ ಕಾಳಹಸ್ತೇಂದ್ರ ಸರಸ್ವತೀ ಶ್ರೀಗಳು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಶ್ರೀಗಳು ಆಶೀರ್ವಚನ ನೀಡುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ ಬೇಕೂರು ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಪುರೋಹಿತ ಕೆ.ರಾಮಕೃಷ್ಣ ಆಚಾರ್ಯ ಕೆಳಗಿನಮನೆ ಆರಿಕ್ಕಾಡಿ ಅವರು ಉಪಸ್ಥಿತರಿರುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು.