ಉಪ್ಪಳ: ಪೈವಳಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಜಂಕಿಲದ ಚೇರಾಲು ಕಾಲುಸಂಕಕ್ಕೆ ಮೋಕ್ಷ ಬೇಕಿದೆ. ಈ ಭಾಗದ ಗ್ರಾಮೀಣ ಮಂದಿ ನಿತ್ಯ ಉಪಯೋಗಿಸುವ ಕಾಲುಸಂಕವು ಜೀರ್ಣಾವಸ್ಥೆಯಲ್ಲಿದ್ದು ಮುರಿದು ಬೀಳುವ ಸ್ಥಿತಿಯಲ್ಲಿದೆ. ಸ್ಥಳೀಯವಾಗಿ ಲಭಿಸುವ ಅಡಕೆ ಮರದ ತೋಪುಗಳಿಂದ ನಿರ್ಮಿಸಲಾದ ಕಾಲುಸಂಕದಲ್ಲಿ ಪ್ರತಿನಿತ್ಯ ನೂರಾರು ಮಂದಿ ನಡೆದು ಸಾಗುತ್ತಾರೆ. ಪ್ರತಿ ಬಾರಿ ಶಿಥಿಲಗೊಂಡ ವೇಳೆ ಖಾಸಗಿ ವ್ಯಕ್ತಿಯ ಖರ್ಚಿನಲ್ಲಿ ಹೊಸ ಮರದ ತೋಪುಗಳನ್ನು ಹಾಕಬೇಕಿದ್ದು ಕಾಲುಸಂಕವನ್ನು ಸರಿಪಡಿಸಲಾಗುತ್ತಿದೆ.
ಸ್ಥಳೀಯ ಗ್ರಾ.ಪಂ ಮೂಲಕ ಹೊಸ ಕಾಲುಸಂಕ ನಿರ್ಮಾಣವಾದಲ್ಲಿ ಪ್ರತಿನಿತ್ಯ ಈ ಕಾಲುದಾರಿಯಾಗಿ ಸಾಗುವ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ಸ್ಥಳೀಯ ಗ್ರಾ.ಪಂ ಸದಸ್ಯ ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆಯಡಿ ಸಿಮೆಂಟ್ ಕಾಲುಸಂಕ ನಿರ್ಮಾಣಕ್ಕೆ ಅಗತ್ಯವಾದ ವಸ್ತು ಹಾಗೂ ಪರಿಕರಗಳನ್ನು ಪೂರೈಸಬೇಕು, ಕಾಲುಸಂಕ ನಿರ್ಮಾಣಕ್ಕೆ ಹಣವನ್ನು ಮೀಸಲಿಟ್ಟು, ಅಭಿವೃದ್ಧಿ ಯೋಜನೆಯಡಿ ಕಾಲುಸಂಕವನ್ನು ಸೇರ್ಪಡೆಗೊಳಿಸಬೇಕೆಂಬ ಮನವಿಯನ್ನು ಸ್ಥಳೀಯ ಗ್ರಾ.ಪಂ ಕಾರ್ಯದರ್ಶಿಗೆ ನೀಡಲಾಗಿದೆ. ಸ್ಥಳೀಯ ಗ್ರಾಮಸಭೆಯಲ್ಲೂ ಕಾಲುಸಂಕ ಅವಶ್ಯಕತೆ ಬಗ್ಗೆ ಗ್ರಾಮಸ್ಥರು ಬೇಡಿಕೆಯಿರಿಸಿದ್ದಾರೆ. ಕಾಲುದಾರಿಯು ಸಜಂಕಿಲದಿಂದ ಚೇರಾಲು ಭಾಗವಾಗಿ ಕನಿಯಾಲವನ್ನು, ಚೇರಾಲಿನಿಂದ ಸಜಂಕಿಲವಾಗಿ ಬಾಯಾರುಪದವನ್ನು ಸಂಪರ್ಕಿಸುತ್ತದೆ.