ಕಾಸರಗೋಡು: ಒಳಾಂಗಣ ಸಸ್ಯಗಳ ಮೂಲಕ ಮಾನಸಿಕ ಒತ್ತಡದ ಪರಿಹಾರದ ಸೂತ್ರದೊಂದಿಗೆ ಜಿಲ್ಲಾ ಖಜಾನೆಯ ಸಿಬ್ಬಂದಿ ನಾಡಿಗೆ ನೂತನ ಪಾಠ ತಿಳಿಸುತ್ತಿದ್ದಾರೆ.
ಬಿರುಸಿನ ಯಾಂತ್ರಿಕ ಬದುಕು ಮಾನವ ಮನಸ್ಸಿನ ಮೇಲೆ ನಿರಂತರ ಒತ್ತಡ ತರುತ್ತಿರುವ ವೇಳೆ ಕಣ್ಣಿಗೆ ಮನಕ್ಕೆ ಮುದ ನೀಡುವ, ಉತ್ಸಾಹದ ಮನೋಭಾವ ತಂದಿಡುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಖಜಾನೆ ಕಚೇರಿಯ ಒಳಗೆ ಮತ್ತು ಆವರಣದಲ್ಲಿ ಹಸುರುಸಿರಿ ತುಂಬಿಕೊಳ್ಳುತ್ತಿದೆ.
ಮನೆಗಳಲ್ಲಿ, ಕಚೇರಿಗಳಲ್ಲಿ ಇಂಡೋರ್ ಪ್ಲಾಂಟ್ ಗಳನ್ನು ಬೆಳೆಸುವ ಕ್ರಮ ರಾಜ್ಯದಲ್ಲಿ ಆರಂಭವಾಗುವುದಕ್ಕೆ ಅನೇಕ ವರ್ಷಗಳ ಹಿದೆಯೇ ಜಿಲ್ಲಾ ಖಜಾನೆಯಲ್ಲಿ ಈ ಕ್ರಮ ಶುರುವಾಗಿದೆ ಎಂಬುದೂ ಗಮನಾರ್ಹ. ನಿತ್ಯವೂ ಬಿರುಸಿನ ವಾತಾವರಣವಿರುವ ಸರಕಾರಿ ಕಚೇರಿಗಳಲ್ಲಿ ಒಂದಾಗಿರುವ ಟ್ರಷರಿಯಲ್ಲಿ ಸಿಬ್ಬಂದಿ ಕಡತ, ಬಿಲ್ ಇತ್ಯಾದಿಗಳ ರಾಶಿಗಳ ನಡುವೆಯೇ ದಿನಕಳೆದುಹೋಗುತ್ತದೆ. ಇಂಥಾ ಯಾಂತ್ರಿಕತೆಯ ನಡುವೆ ಕಣ್ಣಿಗೆ-ಮನಸ್ಸಿಂಗೆ ಮುದ ನೀಡುವ ಅತ್ಯಪೂರ್ವ ಕೊಡುಗೆಗಗಳನ್ನು ಈ ಒಳಾಂಗಣ ಸಸ್ಗಳು ನೀಡುತ್ತವೆ ಎಂಬುದು ಇಲ್ಲಿನ ಸಿಬ್ಬಂದಿಯ ಅನುಭವದ ಮಾತು. ಹಸುರಿನಬನಸಿರಿಯೊಂದಿಗೆ ಉಸಿರಾಟಕ್ಕೆ ಶುದ್ಧವಾಯುವೂ ಲಭಿಸುತ್ತಿದ್ದು, ಸೇವೆಯನ್ನು ಬಯಸಿ ಬರುವ ಸಾರ್ವಜನಿಕರೊಂದಿಗೆ ತಾಳ್ಮೆಯೊಂದಿಗೆ ವ್ಯವಹರಿಸಲು ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಅವರು ಹೇಳುತ್ತಾರೆ.
ಈ ಪೂರಕ ವ್ಯವಸ್ಥೆಯಿಂದ ಪ್ರಯೋಜನೆವಿದೆ ಎಂಬುದನ್ನು ಮನಗಂಡ ಸಿಬ್ಬಂದಿ ಕಳೆದ 5 ವರ್ಷಗಳಿಂದ ಇಲ್ಲಿನೆಟ್ಟು ಬೆಳೆಸುತ್ತಿರುವುದು ನೂರಕ್ಕೂ ಅಧಿಕ ಒಳಾಂಗಣ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಹೂವಿನ ಸಸ್ಯಗಳು, ಔಷಧೀಯ ಸಸ್ಯಗಳೂ ಈ ಸಾಲಿನಲ್ಲಿ ಸೇರಿವೆ. ಇಲ್ಲಿಗೆ ಬರುವ ಕೆಲವು ಸಸ್ಯಪ್ರಿಯರೂ ಇಲ್ಲಿನ ಸಸ್ಯ ಆಸಕ್ತಿ ಗಮನಿಸಿ ತಾವಾಗಿ ಉತ್ತಮ ಸಸಿಗಳನ್ನು ನೀಡಿದ ಉದಾಹರಣೆಗಳೂ ಇವೆ ವಿದೇಶಗಳಿಮದ ತರಲಾದ ಕೆಲವು ಸಸ್ಯಗಳೂ ಇಲ್ಲಿವೆ. ಬೋನ್ಸಾಯಿ ವಿಭಾಗಕ್ಕೆ ಸೇರಿದ ಅಡೀನಿಯಂ ಸಸ್ಯಗಳು, ಡ್ಯಾನ್ಸಿಂಗ್ ಲೇಡಿ ಸಹಿತ ಗ್ರೌಂಡ್ ಆರ್ಕಿಡ್ ಗಳು, ಹಲವು ವಿಧದ ಹ್ಯಾಂಗಿಂಗ್ ಆರ್ಕಿಡ್ ಗಳು, ಮನಿ ಪ್ಲಾಂಟ್ ಗಳು, ಪನ್ನೀರ ಹೂವಿನ ಸಸ್ಯಗಳು, ನಿತ್ಯ ಪುಷ್ಪ, ಸ್ಪೈಡರ್ ಪ್ಲಾಂಟ್, ಕಲೇಡಿಯಂ, ಲಕ್ಕಿ ಬ್ಯಾಂಬೂ, ಡ್ರಸೀನಾ, ಫಿಲೆಡೆಂಡ್ರನ್, ಬೆಡ್ ಆಫ್ ಪ್ಯಾರೆಡೈಸ್, ಸ್ನೇಕ್ ಪ್ಲಾಂಟ್, ಪೀಸ್ ಲಿಲ್ಲಿ ಸಹಿತ ಒಳಾಂಗಣ ಸಸ್ಯಗಳು ಇಲ್ಲಿ ಆಕರ್ಷಣೆ ಪಡೆಯುತ್ತಿವೆ.
ಈ ಸಸ್ಯಗಳನ್ನು ಹೂದಾನಿಯಲ್ಲಿ ವಿಶೇಷ ರೀತಿ ಸಜ್ಜುಗೊಳಿಸಿರುವುದೂ ಖಜಾನೆಯ ಅಂದವನ್ನು ಹೆಚ್ಚಿಸಿದೆ. ಕಚೇರಿಯ ಒಳಗೆ, ವರಾಂಡದಲ್ಲಿ,ಆವರಣದಲ್ಲಿ ವ್ಯವಸ್ಥಿತವಾಗಿ ಇರಿಸಲಾದ ಸಸ್ಯಗಳನ್ನು ಇಲ್ಲಿ ಕಾಣಬಹುದು. ಜೈವಿಕ ರೀತಿಯಲ್ಲೇ ಈ ಸಸ್ಯಗಳನ್ನು ಬೆಳೆಸಲಾಗುತ್ತದೆ ಎಂಬುದೂ ಗಮನಾರ್ಹ ವಿಚಾರ. ಪ್ರತಿತಿಂಗಳು ಸುಮಾರು5 ಕಿಲೋ ಜೈವಿಕ ಗೊಬ್ಬರ ಈ ಸಸ್ಯಗಳಿಗಾಗಿ ಬಳಕೆಯಾಗುತ್ತವೆ. ಕಚೇರಿಯ 6 ಮಂದಿ ಸಿಬ್ಬಂದಿ ಈ ಸಸ್ಯಗಳ ಉಸ್ತುವಾರಿಯ ಹೊಣೆ ಹೊತ್ತಿದ್ದಾರೆ. ರಜಾ ದಿನಗಳಲ್ಲೂ ಇವರು ಈ ಸಸ್ಯಗಳಿಗೆ ನೀರುಣಿಸುವ ಇತ್ಯಾದಿ ಕಾಯಕಗಳಿಗೆ ಕಚೇರಿಗೆ ಬರುತ್ತಾರೆ. ತಾತ್ಕಾಲಿಕ ಸ್ವೀಪರ್ ಆಗಿರುವ ವಿಜಯನ್ ಅವರೂ ಈ ಕಾಯಕದಲ್ಲಿ ಇವರಿಗೆ ಹೆಗಲಾಗಿದ್ದಾರೆ. ಉಳಿದ ಚಟುವಟಿಕೆಗಳಿಗೆ ಕಚೇರಿಯ ಎಲ್ಲ ಸಿಬಂದಿಯ ಬೆಂಬಲವಿದೆ.