ಕಾಸರಗೋಡು: ಜಿಲ್ಲೆಯ ವಿವಿಧೆಡೆ ಸೋಮವಾರ ಮುಂಜಾನೆ ಸಾಮಾನ್ಯದಿಂದ ಭಾರೀ ಮಳೆಯಾಗಿದೆ. ಅಡೂರು, ಚೇವಾರು, ಉಪ್ಪಳ, ಕುಂಬಳೆ, ಕೈಕಂಬ, ಮಂಜೇಶ್ವರ, ಕಾಸರಗೋಡು, ಮಧೂರು, ಬದಿಯಡ್ಕ ಮೊದಲಾದೆಡೆ ಸಾಮಾನ್ಯದಿಂದ ಭಾರೀ ಮಳೆಯಾಗಿದೆ. ಡಾಮರೀಕರಣ ನಡೆಸಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಗೆದು ಹಾಕಿದ ರಸ್ತೆ ಮಳೆ ನೀರಿನಿಂದಾಗಿ ಕೆಸರುಮಯವಾಗಿದೆ. ಇದರಿಂದ ವಿವಿಧೆಡೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಪ್ರಯಾಣಿಕರು ಸಮಸ್ಯೆಗೀಡಾದರು.
ಬದಿಯಡ್ಕ ಸಮೀಪದ ಪೆರ್ಮುಖದಲ್ಲಿ ಸೋಮವಾರ ಬೆಳಗ್ಗೆ ಗಂಟೆಗಳ ಕಾಲ ಮಳೆಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಚೆರ್ಕಳ-ಬದಿಯಡ್ಕ ರಸ್ತೆಯ ಮೆಕ್ಕಾಡಾಂ ಡಾಮರೀಕರಣಕ್ಕಾಗಿ ಆರಂಭಿಕ ಕಾಮಗಾರಿಯಾಗಿ ಬದಿಯಡ್ಕದಿಂದ ನೆಕ್ರಾಜೆ ವರೆಗೆ ರಸ್ತೆಯನ್ನು ಅಗೆಯಲಾಗಿದೆ. ಮಾ.1 ರಂದು ರಾತ್ರಿ ಮತ್ತು ಮಾ.2 ರಂದು ಬೆಳಗ್ಗೆ ಸುರಿದ ಮಳೆಯ ನೀರು ರಸ್ತೆಯಲ್ಲಿ ತುಂಬಿಕೊಂಡು ಕೆಸರುಮಯವಾಗಿದೆ.
ಬೆಳಗ್ಗೆ 7.30 ರಿಂದ 9.30 ರ ವರೆಗೆ ವಾಹನಗಳಿಗೆ ಸಂಚರಿಸಲಾಗದೆ ತೊಂದರೆ ಸೃಷ್ಟಿಯಾಯಿತು. ಬಳಿಕ ಕೆಸರಿನ ಮೇಲೆ ಜಲ್ಲಿಕಲ್ಲು ಹಾಕಿ ವಾಹನ ಸಂಚಾರಕ್ಕೆ ಸೌಕರ್ಯ ಕಲ್ಪಿಸಲಾಯಿತು. ಅದೇ ರೀತಿ ಮುಳ್ಳೇರಿಯ-ಆರ್ಲಪದವು ರಸ್ತೆಯಲ್ಲಿ ಬೆಳ್ಳೂರು ಪಂಚಾಯತ್ ಕಚೇರಿ ಸಮೀಪ ಹಾಗು ಪಳ್ಳಪ್ಪಾಡಿಯಲ್ಲಿ ರಸ್ತೆ ಅಗೆದು ಹಾಕಿದ ಸ್ಥಳದಲ್ಲಿ ಕೆಸರುಗದ್ದೆಯಂತಾಗಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಯಿತು. ನೀರ್ಚಾಲು ಬಳಿಯ ಕನ್ಯಪ್ಪಾಡಿಯಿಂದ ಮುಂಡಿತ್ತಡ್ಕಕ್ಕೆ ತೆರಳುವ ರಸ್ತೆಯ ಕೆಲವೆಡೆ ಹೊಂಡಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.
ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಕೃಷಿಕರು ಮುಂಜಾಗ್ರತೆ ವಹಿಸಿದ ಹಿನ್ನೆಲೆಯಲ್ಲಿ ಒಣಗಲು ಹಾಕಿದ ಅಡಕೆಯನ್ನು ಮಳೆಗೆ ಒದ್ದೆಯಾಗದಂತೆ ಸಂರಕ್ಷಿಸಿದರು. ಮೂರು ದಿನಗಳ ಹಿಂದೆ ಸಾಮಾನ್ಯ ಮಳೆಯಾಗಿತ್ತು. ಮತ್ತೆ ಮಳೆಯಾಗಿರುವುದರಿಂದ ಇಳೆ ತಂಪಾಗಿದೆ. ಜತೆಗೆ ಅಂತರ್ಜಲ ಮಟ್ಟ ಏರುವ ಸಾಧ್ಯತೆಯಿದೆ. ವಿವಿಧೆಡೆಗಳಲ್ಲಿ ದೇಗುಲಗಳಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಅಕಾಲಿಕ ಮಳೆಯಿಂದ ಸಮಸ್ಯೆಯುಂಟಾಯಿತು. ರಸ್ತೆ ಕಾಮಗಾರಿ ಪೂರ್ತಿಗೊಂಡರೂ ಒಳಚರಂಡಿ ಕೆಲಸ ಸಮಪರ್ಕಗೊಳಿಸದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುವಂತಾಯಿತು.