HEALTH TIPS

ಬದಿಯಡ್ಕ ಶ್ರೀರಾಮಲೀಲಾ ಯೋಗ ಕೇಂದ್ರದಲ್ಲಿ ಒಂದು ತಿಂಗಳ ಯೋಗ ಶಿಬಿರಕ್ಕೆ ಚಾಲನೆ- ಆರೋಗ್ಯಪೂರ್ಣ ದೇಹದೊಂದಿಗೆ ವಿವೇಕವಿದ್ದರೆ ಮಾತ್ರ ಯಶಸ್ಸಿನ ಮೆಟ್ಟಿಲನ್ನೇರಲು ಸಾಧ್ಯ : ಆದಿತ್ಯಕೃಷ್ಣ ಮಾವೆ

   
        ಬದಿಯಡ್ಕ: ಉತ್ತಮವಾದ ಆರೋಗ್ಯದೊಂದಿಗೆ ಸದೃಢವಾದ ದೇಹವನ್ನು ಪ್ರತಿಯೊಬ್ಬನೂ ಬಯಸುತ್ತಾನೆ. ದೇಹದೊಂದಿಗೆ ವಿವೇಕವಿದ್ದರೆ ಮಾತ್ರ ಆತ ತನ್ನ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನೇರಲು ಸಾಧ್ಯವಿದೆ. ಸತತ ಯೋಗಾಭ್ಯಾಸವನ್ನು ಮಾಡುವುದು ಇದಕ್ಕೆಲ್ಲ ಪೂರಕವಾಗಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಪ್ರಧಾನರಾದ ಆದಿತ್ಯ ಕೃಷ್ಣ ಮಾವೆ ಹೇಳಿದರು.
       ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಭಾಗ, ಧರ್ಮನಿಧಿ ಯೋಗ ಪೀಠ ಮಂಗಳ ಗಂಗೋತ್ರಿ ಹಾಗೂ ಬದಿಯಡ್ಕ ಪದ್ಮಶ್ರೀ ಟ್ಯುಟೋರಿಯಲ್ಸ್‍ನ ನೇತೃತ್ವದಲ್ಲಿ ಬದಿಯಡ್ಕ ಶ್ರೀರಾಮ ಲೀಲಾ ಯೋಗ ಕೇಂದ್ರದಲ್ಲಿ ಸೋಮವಾರ ಆರಂಭವಾದ ಒಂದು ತಿಂಗಳ ಕಾಲ ನಡೆಯುವ ಮಾನಸಿಕ ಆರೋಗ್ಯ ಮತ್ತು ಯೋಗ ಚಿಕಿತ್ಸಾ ತರಬೇತಿ ಶಿಬಿರದಲ್ಲಿ ಅವರು ಮುಖ್ಯ ಭಾಷಣವನ್ನು ಮಾಡಿದರು.
    ಮನಸ್ಸು ಮತ್ತು ದೇಹಕ್ಕೆ ಕಾಲಕ್ಕೆ ತಕ್ಕಂತೆ ವಿಶ್ರಾಂತಿಯನ್ನು ನೀಡಬೇಕು. ಮನೋನಿಗ್ರಹಕ್ಕೆ ಏಕಾಗ್ರತೆ ಅತೀ ಪ್ರಾಮುಖ್ಯವಾಗಿದೆ. ಮನುಷ್ಯನಿಗೆ ಮಾನಸಿಕ ನೆಮ್ಮದಿಯಿಲ್ಲದಿದ್ದರೆ ಯಾವುದೇ ವ್ಯವಹಾರಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ನಮ್ಮ ದೇಹ ಮತ್ತು ಮನಸ್ಸನ್ನು ಸಿದ್ಧಗೊಳಿಸಬೇಕಿದೆ. ಸಾಂಸಾರಿಕ ಜಂಜಾಟಗಳಿಂದ ತೊರೆದು ದಿನದ ಕೆಲವೊಂದು ಸಮಯವನ್ನು ಯೋಗ, ಧ್ಯಾನದತ್ತ ನೀಡಬೇಕು. ಮನೋನಿಗ್ರಹಕ್ಕೆ ಮೊದಲ ಆದ್ಯತೆಯನ್ನು ನೀಡಬೇಕು ಎಂದರು.
       ಯಕ್ಷಗಾನ ಕಲಾವಿದ, ಸಂಘಟಕ ಕರಿಂಬಿಲ ಲಕ್ಷ್ಮಣ ಪ್ರಭು ದೀಪಬೆಳಗಿಸಿ ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಸುದೀರ್ಘ ಹಾಗೂ ಆರೋಗ್ಯಪೂರ್ಣವಾದ ಜೀವನವನ್ನು ನಡೆಸಬೇಕಾದರೆ ಯೋಗ ಹೇಗೆ ಸಹಕಾರಿ ಎಂಬುದಕ್ಕೆ ನಮ್ಮ ದೇಶದ ಪ್ರಧಾನಿಯವರೇ ಉತ್ತರವಾಗಿದ್ದಾರೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗಕ್ಕೆ ಮಾನ್ಯತೆಯು ಲಭಿಸಿದೆ. ಮನುಷ್ಯನ ಜೀವನಕ್ಕೆ ಆಹಾರ ಪದಾರ್ಥಗಳು ಹೇಗೆ ಅಗತ್ಯವಿದೆಯೋ ಹಾಗೆಯೋ ಸುದೃಢವಾದ ಆರೋಗ್ಯಕ್ಕೆ ಯೋಗವು ಪರಿಣಾಮಕಾರಿಯಾಗಿದೆ. ರೋಗರುಜಿನಗಳಿಲ್ಲದೆ ಯೋಗ ಎಷ್ಟು ಸಹಕಾರಿ ಎಂಬುದನ್ನು ಈ ಶಿಬಿರದ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.
      ಪದ್ಮಶ್ರೀ ಟ್ಯುಟೋರಿಯಲ್ಸ್‍ನ ಪದ್ಮರಾಜ ಪಟ್ಟಾಜೆ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪ್ರತೀದಿನ ಸಂಜೆ 5ರಿಂದ 6 ಗಂಟೆಯ ತನಕ ನಡೆಯಲಿರುವ ಯೋಗಶಿಬಿರವು ಈ ಊರಿನ ಜನತೆಗೆ ಪ್ರಯೋಜನಪ್ರದವಾಗಲಿ ಎಂದರು. ಯೋಗ ಶಿಕ್ಷಕ ಸೂರ್ಯನಾರಾಯಣ ವಳಮಲೆ ಸ್ವಾಗತಿಸಿ, ಎಡನೀರು ಶಾಲೆಯ ಅಧ್ಯಾಪಕ ವಿನೋದ್ ಕುಮಾರ ಸಿ.ಎಚ್. ವಂದಿಸಿದರು. ಪ್ರಾರ್ಥನೆಯನ್ನು ನಡೆಸಿಕೊಟ್ಟ ಯೋಗ ತರಬೇತುದಾರೆ ಸುನಾದ ಒಂದು ತಿಂಗಳ ಕಾಲ ತರಗತಿಯನ್ನು ನಡೆಸಿಕೊಡಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries