ಪೆರ್ಲ: ದೇವರನ್ನು ಪೂಜಿಸುವ ಶ್ರೇಷ್ಠ ಸಂಸ್ಕøತಿ, ಆಧ್ಯಾತ್ಮಿಕತೆ ತುಂಬಿ ತುಳುಕಾಡುವ ಭಾರತವು ಜಗತ್ತಿನ ದೇವರ ಕೋಣೆಯಾಗಿದೆ. ಸನಾತನ ಹಿಂದೂ ಧರ್ಮದಲ್ಲಿ ಹೇಳಲಾಗುವ ಪ್ರತಿಯೊಂದು ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿದರೆ ಸಮಸ್ತ ಜಗತ್ತಿನ ಮಾನವ ಕುಲಕ್ಕೆ ಸಾತ್ವಿಕ ಮತ್ತು ಸುಖ ಜೀವನ ದೊರೆಯಲಿದೆ ಎಂದು ಕೊಂಡೆವೂರು ಶ್ರೀ ಕ್ಷೇತ್ರದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶ್ರೀ ಸುಬ್ರಾಯ ದೇವಸ್ಥಾನ ಕಾಟುಕುಕ್ಕೆ ಮತ್ತು ಶ್ರೀ ಸುಬಹ್ಮಣ್ಯೇಶ್ವರ ಪ್ರಸಾದಿತ ಭಜನಾ ಸಂಘ ಕಾಟುಕುಕ್ಕೆ ಆಶ್ರಯದಲ್ಲಿ ಭಜನಾ ಸಂಘದ 75ನೇ ವಾರ್ಷಿಕೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಚಿತೆ ನಿರ್ಜೀವ ಶರೀರವನ್ನು ಸುಟ್ಟರೆ ಚಿಂತೆ ಜೀವಂತ ಶರೀರವನ್ನೇ ಸುಡುವುದು.ಭೂತಕಾಲದ ಚಿಂತೆಯಿಂದ ವರ್ತಮಾನ ಕಾಲ, ಭವಿಷ್ಯವನ್ನು ಹಾಳು ಮಾಡುತ್ತಿದ್ದೇವೆ.ನಂಬಿದರೆ ಕಲ್ಲೂ ದೇವರಾಗುವುದು.ನಂಬಿಕೆ ಇಲ್ಲದಿದ್ದರೆ ದೇವರೂ ಕಲ್ಲಾಗುವನು.ಕುಳಿತು ಭಜಿಸಿದಾಗ ನಿಂತು ಕೇಳುವ ದೇವರು, ನಿಂತು ಭಜಿಸಿದಾಗ ಕುಣಿದು ಕೇಳಿಸುತ್ತಾನೆ.ಕುಣಿದಾಡಿ ಭಜಿಸಿದಾಗ ಒಲಿಯತ್ತಾನೆ. ವಿವೇಕ, ಬುದ್ಧಿಶಕ್ತಿಯಿಂದ ಜೀವನದ ಗುರಿ ಏನು ಎಂಬುದನ್ನು ಅರಿಯುವ ಸಾಮಥ್ರ್ಯ ಹೊಂದಿರುವ ಒಂದೇ ಒಂದು ಜನ್ಮ ಮನುಷ್ಯ ಜನ್ಮ.ಭಗವಂತ ನೀಡಿದ ಶರೀರವನ್ನು ಭಗವತ್ ಕಾರ್ಯಗಳಲ್ಲಿ ತೊಡಗಿಸಿಕೊಂಡಲ್ಲಿ ಜೀವನದ ಪಾಪ ಲೇಪಗಳು ಕರಗುವುದು.ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುವುದು.ಶುದ್ಧ ಹೃದಯದ ಚಿಂತನೆ, ದೇವರ ನಿತ್ಯ ಸ್ಮರಣೆಯಿಂದ ಆಂತರ್ಯದ ಕಷ್ಮಲಗಳು ನೀಗುವುದು. ಇತರರು ನಮ್ಮನ್ನು ಚಿರಕಾಲ ಸ್ಮರಿಸುತ್ತಾರೆ ಎಂದಾದರೆ ಅದರಷ್ಟು ಪುಣ್ಯ ಬೇರೊಂದಿಲ್ಲ ಎಂದರು.
ಹರಿದಾಸ ದೀಕ್ಷೆ ಪಡೆದ ಶ್ರೀ ಮಧ್ವಾಧೀಶ ವಿಠಲದಾಸ(ರಾಮಕೃಷ್ಣ ಕಾಟುಕುಕ್ಕೆ) ಪ್ರಾಸ್ತಾವಿಕವಾಗಿ ಮಾತನಾಡಿ, ಪರಶುರಾಮ ಸೃಷ್ಟಿ ಪುಣ್ಯ ನೆಲದ ಆರಾಧನಾ ಪರಂಪರೆಯಿಂದ ಯಾವುದೇ ಅನಾಹುತಗಳು, ಪ್ರಕೃತಿ ವಿಕೋಪಗಳು ಸಂಭವಿಸಿಲ್ಲ.ರಾಮಾಯಣ ಮಹಾಭಾರತ ಪುರಣಗಳು ಜನರ ಆಂತರ್ಯದಲ್ಲಿ ಭಕ್ತಿ ಜಾಗೃತವಾಗಿದೆ. ದೇವರನ್ನು ಹೃದಯದಲ್ಲಿರಿಸಿ ಪೂಜಿಸಬೇಕು.ದೇವರ ಕೃಪೆ, ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿಯಿಂದ ಭಜನಾ ಸಂಘ 75 ಸಂವತ್ಸರ ದಾಟಿದೆ.ಮನೆ ಮನೆಗಳಲ್ಲಿ ಭಜನೆಗಳು ನಡೆಯಲು ಅಖಂಡ ಭಜನೆ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದರು.
ಕಾಟುಕುಕ್ಕೆ ದೇವಳದ ಮಾಜಿ ಆಡಳಿತ ಮೊಕ್ತಸರ ವಿಷ್ಣುಪ್ರಸಾದ್ ಪಿಲಿಂಗಲ್ಲು ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಪ್ರಸಾದ್ ಗ್ರೂಪ್ ಆಫ್ ಹೋಟೆಲ್ ಮಾಲಕ ರಾಮಪ್ರಸಾದ್, ಕರ್ನಾಟಕ ಜೂನಿಯರ್ ಕಾಲೇಜು ಮಾಣಿ ನಿವೃತ್ತ ಶಿಕ್ಷಕ ಗಂಗಾಧರ ರೈ ಪಡ್ಡಂಬೈಲುಗುತ್ತು, ಮುಂಬಯಿ ಉದ್ಯಮಿ ರಾಧಾಕೃಷ್ಣ ರೈ ಪಡ್ಡಂಬೈಲುಗುತ್ತು ಮಾತನಾಡಿದರು.ದೇವಳದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣನ್, ಭಜನಾ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ ಮಾಯಿಲಂಗಿ ಉಪಸ್ಥಿತರಿದ್ದರು. ಉಮಾ ರಾವ್, ಅರುಣಲತಾ ಪಡ್ಪು ಪ್ರಾರ್ಥಿಸಿದರು. ದೀಪಕ್ ಭಂಡಾರದ ಮನೆ ಸ್ವಾಗತಿಸಿ, ಚೇತನ ನಿರೂಪಿಸಿದರು.