ಕಾಸರಗೋಡು: ಉನ್ನತ ಅಧ್ಯಯನದ ಹೆಸರಲ್ಲಿ ದೀರ್ಘ ರಜೆ ಪಡೆದು ತೆರಳುವ ಶಿಕ್ಷಕರು ಬೇಸಿಗೆ ರಜೆ ಆರಂಭಗೊಳ್ಳುವ ಒಂದೆರಡು ದಿನ ಮೊದಲು ಶಾಲೆಗೆ ಆಗಮಿಸಿ ಹಾಜರಿ ಹಾಕುವ ಪರಿಪಾಠಕ್ಕೆ ಸರ್ಕಾರ ಕಡ್ಡಾಯ ನಿಷೇಧ ಹೇರಲು ಮುಂದಾಗಿದೆ. ದೀರ್ಘ ಕಾಲದ ರಜೆ ಪಡೆದು ತೆರಳುವ ಶಿಕ್ಷಕ ಯಾ ಶಿಕ್ಷಕಿಯರು ಎರಡು ತಿಂಗಳ ಬೇಸಿಗೆ ರಜೆಯ ವೇತನ ಪಡೆದುಕೊಳ್ಳುವ ನಿಟ್ಟಿನಲ್ಲಿ ಮಾರ್ಚ್ ಅಂತ್ಯಕ್ಕೆ ಶಾಲೆಗೆ ಆಗಮಿಸಿ ಹಾಜರಿ ಹಾಕಿಸಿಕೊಳ್ಳುವುದು ವಾಡಿಕೆಯಾಗಿದೆ.
ಉನ್ನತ ಶಿಕ್ಷಣ, ಸಂಶೋಧನೆ, ಪತಿ ಯಾ ಪತ್ನಿಯೊಂದಿಗೆ ವಿದೇಶ ಪರ್ಯಟನೆ, ವೈದ್ಯಕೀಯ ಸರ್ಟಿಫಿಕೇಟ್ ಹೊಂದಿ ಅಥವಾ ಹೊರತಾದ ಚಿಕಿತ್ಸೆ, ಉನ್ನತ ಉದ್ಯೋಗಕ್ಕೆ ಸಂಬಂಧಿಸಿ ದೀರ್ಘ ರಜೆ ಪಡೆದು ತೆರಳುವ ಶಿಕ್ಷಕ ಅಥವಾ ಶಿಕ್ಷಕಿಯರು ಮಾರ್ಚ್ ತಿಂಗಳ ಕೊನೆಯ ದಿವಸಗಳಲ್ಲಿ ತರಾತುರಿಯಿಂದ ಶಾಲೆಗೆ ಆಗಮಿಸಿ ಹಾಜರಿಪುಸ್ತಕದಲ್ಲಿ ತಮ್ಮ ಹಾಜರ್ ನಮೂದಿಸುವ ಮೂಲಕ ಮುಂದಿನ ಎರಡು ತಿಂಗಳ ವೇತನ ಪಡೆದುಕೊಳ್ಳಲು ಸಜ್ಜಾಗುತ್ತಾರೆ. ಈ ಪ್ರಕ್ರಿಯೆ ವಿರುದ್ಧ ಏಳು ವರ್ಷಗಳ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿದ್ದರೂ, ಇದು ಪಾಲನೆಯಾಗುತ್ತಿರಲಿಲ್ಲ. ಸರ್ಕಾರ ಆರ್ಥಿಕ ಸಂಕಷ್ಟಕ್ಕೊಳಗಾಗುತ್ತಿದ್ದಂತೆ ಹೆಚ್ಚಿನ ಖರ್ಚುವೆಚ್ಚಗಳ ಮೇಲೆ ನಿಗಾ ವಹಿಸಲಾರಂಭಿಸಿದ ಹಿನ್ನೆಲೆಯಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮುಂದಾಗಿದೆ.
ದೀರ್ಘ ಕಾಲ ರಜೆ ಪಡೆದು ತೆರಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಈ ಶಿಕ್ಷಕರ ತರಗತಿ ನಷ್ಟವೇ ಹೊರತು, ಇನ್ಯಾವುದೇ ಲಾಭವಿಲ್ಲ. ಈ ರೀತಿ ಮಾರ್ಚ್ ಅಂತ್ಯದ ವೇಳೆಗೆ ಶಾಲೆಗೆ ಆಗಮಿಸಿ ಹಾಜರಿ ಹಾಕುವ ಶಿಕ್ಷಕರಿಗೆ ಬೇಸಿಗೆ ರಜೆಯ ವೇತನ ನೀಡಬೇಕಾಗಿಲ್ಲ. ದೀರ್ಘ ರಜೆ ಪಡೆಯುವವರು ಬೇಸಿಗೆ ರಜೆಯನ್ನೂ ಒಳಪಡಿಸಿ ರಜೆಗೆ ಮನವಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.