ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲ ಸಭೆಯು ನೀರ್ಚಾಲು ವಲಯದ ಅಗ್ರಸಾಲೆ ಶ್ರೀ ಶಾಸ್ತಾರ ಮಂದಿರದಲ್ಲಿ ಇತ್ತೀಚೆಗೆ ಜರಗಿತು. ನೀರ್ಚಾಲು ವಲಯಾಧ್ಯಕ್ಷರಾದ ಜಯದೇವ ಖಂಡಿಗೆ ಧ್ವಜಾರೋಹಣಗೈದರು.
ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು ಪ್ರಾಸ್ತಾವಿಕವಾಗಿ ಮಾತನಾಡಿ, ಗತ ಸಭೆಯ ವರದಿಯನ್ನು ವಾಚಿಸಿ ಅನುಮೋದನೆ ಪಡೆದು ಕೊಂಡರು. ಕೋಶಾಧಿಕಾರಿ ಶ್ರೀಹರಿ ಪೆರುಮುಖ ತಿಂಗಳ ಲೆಕ್ಕಪತ್ರ ಮಂಡಿಸಿದರು. ಬಳಿಕ ಶಾಸನತಂತ್ರದ ವಿವಿಧ ವಿಭಾಗಗಳಾಗಿರುವ ಧರ್ಮ ಕರ್ಮ, ಮಾತೃ, ವಿದ್ಯಾರ್ಥಿ ವಾಹಿನಿ, ಮುಷ್ಠಿಭಿಕ್ಷೆ, ಬಿಂದು ಸಿಂಧು, ಸಹಾಯ, ಸೇವಾ ವಿಭಾಗಗಳ ವರದಿ ಮಂಡನೆ ಮಾಡಲಾಯಿತು.
ಶ್ರೀ ಮಠದ ಶಿಷ್ಯ ಗುತ್ತಿಗಾರು ವಲಯದ ಕಾರ್ತಿಕನ ಚಿಕಿತ್ಸೆಗೆ ಶ್ರೀ ಮಠದಿಂದ ಕೊಡಮಾಡಿದ ಸಹಾಯಧನವನ್ನು ಗುತ್ತಿಗಾರು ವಲಯ ಕಾರ್ಯದರ್ಶಿಯವರಿಗೆ ಹಸ್ತಾಂತರಿಸಲಾಯಿತು. ಶ್ರೀ ರಾಮಚಂದ್ರಾಪುರಮಠ ಮಹಾನಂದಿ ಗೋಲೋಕ ಶ್ರೀ ಗೋವರ್ಧನ ಗಿರಿಧಾರಿ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಜರಗಲಿರುವ ಕೃಷ್ಣಾರ್ಪಣಮ್ ಸಮಾರಂಭ, ಮಾ.9 ರಂದು ಕೆಕ್ಕಾರು ಮಠದಲ್ಲಿ ನಡೆಯುವ ಶ್ರೀ ರಾಮಚಂದ್ರ ಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ, ಮಾ.13 ರಿಂದ 17 ರ ವರೆಗೆ ಹೈಗುಂದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಅಷ್ಟ ಬಂಧ, ಪುನ:ಪ್ರತಿಷ್ಟಾ, ಬ್ರಹ್ಮಕಲಶೋತ್ಸವ ಇವುಗಳ ಮಾಹಿತಿಗಳನ್ನು ನೀಡಲಾಯಿತು.
ಶ್ರೀ ನಂದಿಕೇಶ್ವರ ದೇವಸ್ಥಾನ, ಕಲ್ಲಬ್ಬೆ, ಕುಮಟಾದಲ್ಲಿ ನಿರ್ಮಾಣಗೊಳ್ಳಲಿರುವ ಸಭಾಭವನ ಮತ್ತು ಭೋಜನಾಲಯದ ವಿವರ ನೀಡಲಾಯಿತು. ಮತ್ತು ಸರ್ವರೂ ಸಹಕಾರ ನೀಡಲು ವಿನಂತಿಸಲಾಯಿತು. ಶ್ರೀ ರಾಮತಾರಕ ಜಪ, ಶಾಂತಿಮಂತ್ರ, ಧ್ವಜಾವರೋಹಣ, ಶಂಕನಾದದೊಂದಿಗೆ ಸಭೆ ಮುಕ್ತಾಯವಾಯಿತು.