ಕಾಸರಗೋಡು: ಮನುಷ್ಯ ಹೃದಯಗಳು ಇಂದು ಒಣಗಿ ಹೋಗಿವೆ. ಪ್ರೀತಿ ವಿಶ್ವಾಸಗಳು ಸಿಗಬೇಕಾದರೆ ಇಂದು ಹೃದಯದ ಆಳಕ್ಕೆ ರಿಂಗ್ ಹಾಕುವಂತಹ ಸಂದರ್ಭ ಬಂದೊದಗಿದೆ. ಅಂತಹ ಸಂದರ್ಭದಲ್ಲಿ ಹೃದಯ ಶ್ರೀಮಂತಿಕೆಯಿಂದ ಕೂಡಿದ ಕಾಸರಗೋಡಿನ ಜನತೆಯ ಅಭಿನಂದನೆ ಮರೆಯಲಾಗದ ಒಂದು ಕ್ಷಣವನ್ನು ಒದಗಿಸಿಕೊಟ್ಟಿದೆ ಡಾ.ಹಂಪನಾ ಅವರು ಹೇಳಿದರು.
ಚಾಲದ ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಪ್ರಾಯೋಜಕತ್ವದಲ್ಲಿ ಅಪೂರ್ವ ಕಲಾವಿದರು ಕಾಸರಗೋಡು ನೇತೃತ್ವದಲ್ಲಿ ಚಾಲದ ಕಣ್ಣೂರು ವಿಶ್ವವಿದ್ಯಾನಿಲಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗ ಸಹಯೋಗದಲ್ಲಿ ಆಯೋಜಿಸಿದ `ಕನ್ನಡ ಚಿಂತನೆ' ತಿಂಗಳ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಸಮಾನ ಮನಸ್ಕರು, ಸಮಾನ ವಯಸ್ಕರು, ಸಮಾನ ವಿದ್ಯಾ ಸಂಸ್ಕಾರವುಳ್ಳಂತವರನ್ನು ಒಳಗೊಂಡಿರುವಂತದ್ದೇ ಗೋಷ್ಠಿ. ಆ ನೆಲೆಯಿಂದಲೂ ಈ ಕಾರ್ಯಕ್ರಮ ಸಂಪನ್ನಗೊಂಡಿದೆ ಎಂದ ಅವರು ಭಿನ್ನಾಭಿಪ್ರಾಯ ಬಂದಾಗ ಒಂದು ಕ್ಷಣ ಅದನ್ನು ದಾಟಿ ಬಿಡಬೇಕು. ಹಾಗಾದಾಗ ಸಂಬಂಧಗಳು ಯಾವತ್ತೂ ಹೊಸತಾಗಿಯೇ ಉಳಿದುಕೊಳ್ಳುತ್ತವೆ ಎಂದರು. ಕಾವ್ಯ ಮೀಮಾಂಸೆಯಲ್ಲಿ ಬಂದಂತಹ ಸಹೃದಯ ಪದದ ಅರ್ಥವ್ಯಾಪ್ತಿ ಹಾಗೂ ವಿಶೇಷತೆಯ ಬಗೆಗೆ ಮಾತನಾಡಿದ ಹಂಪನಾ ಸಹೃದಯ ಎಂಬಂತಹ ಪದಕ್ಕೆ ಸಮಾನವಾದ ಪದ ಆಂಗ್ಲ ಭಾಷೆಯಲ್ಲಿಲ್ಲ. ಕನ್ನಡದಲ್ಲಿ ಮಾತ್ರವೇ ಇದೆ. ಕನ್ನಡದ ಜನರ ಹಾಗೂ ಭಾಷೆಯ ಶ್ರೀಮಂತಿಕೆಯನ್ನಿದು ತಿಳಿಸುತ್ತದೆ ಎಂದರು. ಹಂಪನಾ ಮತ್ತು ಕಮಲಾ ಹಂಪನಾ ಅವರ ಕೃತಿಗಳು ಕೇವಲ ನಮಗೆ ಮಾತ್ರ ಸೀಮಿತವಲ್ಲ ಅದು ಕನ್ನಡದ ಕೃತಿಗಳು, ಕನ್ನಡ ಕೃತಿಗಳ ಬಗೆಗೆ ಮಾತನಾಡುವುದೆಂದರೆ ಅದು ಭಾರತೀಯ ಕೃತಿಗಳ ಬಗೆಗೆ ಮಾತನಾಡುವುದೆಂದರ್ಥ. ಆ ಮೂಲಕ ವಿಶ್ವ ಸಾಹಿತ್ಯದ ಬಗೆಗೆ ಮಾತನಾಡುತ್ತೇವೆಂದರ್ಥ ಎಂದು ನುಡಿದರು.
ಡಾ.ಕಮಲಾ ಹಂಪನಾ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ ಕಾಸರಗೋಡಿನವರ ಪ್ರೀತಿಯ ಮುಂದೆ ಮಾತು ಹುದುಗಿ ಹೋಗಿದೆ ಎಂದ ಅವರು ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿದ್ದರೂ ನಾನದನ್ನುಅನ್ಯವಾಗಿ ಕಂಡಿಲ್ಲ. ಕರ್ನಾಟಕದ ಭಾಗವಾಗಿಯೇ ಕಂಡಿದ್ದೇನೆ. ಇಲ್ಲಿನ ಕನ್ನಡಿಗರೂ ಹಾಗೆಯೇ ಭಾವಿಸಿಕೊಂಡಿದ್ದಾರೆ. ಇಲ್ಲಿನ ಭಾಷಾ ಸಾಮರಸ್ಯಕ್ಕೆ ಬಾಂಧವ್ಯಕ್ಕೆ ಬೆರಗಾಗಿದ್ದೇನೆ ಎಂದ ಅವರು ಹಲವು ಭಾಷೆಗಳ ಜನರು ಇಲ್ಲಿ ಪ್ರೀತಿಯಿಂದ, ಸೌಹೃದಯತೆಯಿಂದ ಒಬ್ಬರು ಮತ್ತೊಬ್ಬರನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಬದುಕುತ್ತಿದ್ದಾರೆ. ಕಾಸರಗೋಡಿಗೆ ಬಂದ ಬಳಿಕ ಡಾ|ರತ್ನಾಕರ ಮಲ್ಲಮೂಲೆಯವರು ಅವರ ಜತೆಗೆ ಇದ್ದಷ್ಟು ಹೊತ್ತೂ ಇಲ್ಲಿನ ಜನರ ಸಾಹಿತ್ಯಕ-ಸಾಂಸ್ಕøತಿಕ ಜೀವನವನ್ನು ಸ್ಥಳೀಯತೆಯ ಪರಿಚಯವನ್ನು ಮಾಡುವಾಗ ನಾನು ಬೆರಗಾದೆ. ಅವರ ಮುಂದೆ ವಿದ್ಯಾರ್ಥಿಯಾದೆ. ಇದು ನಿಮ್ಮೆಲ್ಲರ ಪ್ರತಿಬಿಂಬ. ಅವರ ವಿದ್ಯಾರ್ಥಿಗಳೂ ನಾಳೆ ಹೀಗೆಯೇ ಬೆಳೆಯಬೇಕು, ಬೆಳೆಯಬಲ್ಲರು ಎಂದ ಅವರು ಮನುಷ್ಯ ಎಷ್ಟೇ ಸಾಧನೆಯನ್ನು ಮಾಡಲಿ, ಆತ ವಿನಯವಂತನಾಗಿರಬೇಕು ಎಂಬುದನ್ನು ನುಡಿದ ಮಲ್ಲಮೂಲೆಯವರ ಮಾತಿಗೆ ಅವರ ಮನೆಯೇ ಉದಾಹರಣೆ ಎಂದರು. ಊಟದ ಸಂದರ್ಭದಲ್ಲಿ ಮನೆಯಲ್ಲಿದ್ದ ಹದಿನೈದಕ್ಕೂ ಹೆಚ್ಚು ಮಂದಿ ಆಥಿತ್ಯದಲ್ಲಿ ನಾ ಮುಂದು ತಾ ಮುಂದು ಎಂದು ಮುಂದೆ ಬರುತ್ತಿದ್ದ ಸಂದರ್ಭವಂತೂ ನನಗೆ ಭರತೇಶ ವೈಭವದ ಅಡುಗೆ ಮನೆ ಸೌಂದರ್ಯ ಸೊಗಸನ್ನು ನೆನಪಿಸಿತು ಎಂದು ಭಾವುಕರಾಗಿ ನುಡಿದರು. ಅಲ್ಲಿ ಕಂಡ ವಾತ್ಸಲ್ಯ ಮರೆಯುವಂತದ್ದಲ್ಲ, ಆ ಮನೆಯ ವಾತಾವರಣ ನನ್ನಲ್ಲಿ ಮನೆ ಎಂದರೆ ಹೀಗಿರಬೇಕು ಎಂಬ ಭಾವನೆಯನ್ನು ಮೂಡಿಸಿತು. ಕಾಸರಗೋಡಿನ ಎಲ್ಲರ ಮನೆಗಳೂ ಹೀಗೇ ಇರುತ್ತವೆ ಎಂಬುದನ್ನು ತಿಳಿದು ಸಂತೋಷಗೊಂಡೆ ಎಂದ ಅವರು ಇಲ್ಲಿಯ ಸಾಮರಸ್ಯ ಸಂಬಂಧಗಳನ್ನು ಕಂಡು ಬೆರಗಾಗಿದ್ದೇನೆ ಎಂದರು.
ತಮ್ಮ ಅಧ್ಯಾಪನ ಜೀವನದಲ್ಲಿ ನಡೆದ ಘಟನೆಗಳನ್ನ ನೆನಪಿಸಿಕೊಂಡ ಅವರು ಓದುವಿಕೆ ಅನಿವಾರ್ಯವಾಗಬಾರದು, ಆಸಕ್ತಿಯಾಗಬೇಕು ಎಂದು ಕರೆ ನೀಡಿದರು. ಜಗತ್ತಿನ ಜತೆಗೆ ಹೊಂದಾಣಿಕೆ, ಎಲ್ಲರ ಜೊತೆಗೆ ಸಹಬಾಳ್ವೆ ಮತ್ತು ಪ್ರೀತಿ ಇದುವೇ ಮನುಷ್ಯಧರ್ಮಎಂದರು. ಕನ್ನಡದ ಅಗ್ರಗಣ್ಯ ಪ್ರತಿಭೆಗಳಾದ ಕುವೆಂಪು, ಕೆಂಪೇಗೌಡ ಮುಂತಾದವರು ಕನ್ನಡ ನಾಡು, ನುಡಿ ಬಗೆಗಿನ ಪ್ರೀತಿಯನ್ನ, ಶೂನ್ಯ ಪ್ರಜ್ಞೆಯನ್ನು ಬಡಿದೆಬ್ಬಿಸುವಲ್ಲಿ ನನ್ನ ಮೇಲೆ ಪ್ರಭಾವವನ್ನು ಬೀರಿದ್ದಾರೆ. ಕಣ್ಣಿಗೆ ಕಾಣದ ದೇವರುಗಳಿಗಿಂತ ನನ್ನನ್ನು ಬೆಳೆಸಿದ ಗುರುಗಳು ಮತ್ತು ತಂದೆ ತಾಯಿಗಳೇ ನನ್ನ ಪಾಲಿನ ದೇವರು ಎಂದು ನುಡಿದರು. `ಡೋಂಟ್‍ಎಂಟರಿಂಗ್ ಟು ದ ಕ್ಲಾಸ್ ವಿತ್‍ಔಟ್ ಪ್ರಿಪರೇಷನ್'ಎನ್ನುವ ಗುರುಗಳಾದ ಡಿ. ಎಲ್.ಎನ್. ಅವರ ಮಾತು ನನ್ನ ಯಶಸ್ಸಿಗೆ ಇಂದಿಗೂ ಕಾರಣವಾಗಿದೆ. ಸಂಶೋಧನಾ ಕ್ಷೇತ್ರಕ್ಕೆ ಬರುವುದಕ್ಕೂ ಅವರೇ ಕಾರಣ ಎಂದರು. ಹೆಣ್ಣು ಮಕ್ಕಳ ವಿಧ್ಯಾಭ್ಯಾಸಕ್ಕೆ ಜೈನ ಪರಂಪರೆಯಲ್ಲಿ ಬಹಳ ಮಹತ್ವವಿದೆ. ಇಂದಿನ ಸಂದರ್ಭದಲ್ಲೂ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಬೇಕಿದೆ. ಶ್ರಮ, ತಪಸ್ಸು, ಶ್ರದ್ಧೆಯನ್ನು ಬೇಡುವ ಸಂಶೋಧನೆ- ಸಂಪಾದನೆಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚು ತೊಡಗಿಸಿಕೊಳ್ಳಬೇಕು ಎಂಬುದಾಗಿ ಕರೆ ನೀಡಿದರು.
ಡಾ.ಹಂಪನಾ ಅಭಿನಂದನೆ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾಗಿರುವ ಪೆÇ್ರ|ಎನ್.ಎಂ.ತಳವಾರ್ ಅಧ್ಯಕ್ಷತೆ ವಹಿಸಿದರು. ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ|ವರದರಾಜ ಚಂದ್ರಗಿರಿ ಅಭಿನಂದನ ನುಡಿಯನ್ನಾಡಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಸುಜಾತ ಎಸ್, ಲೇಖಕ ಚಂದ್ರಶೇಖರ ಮಂಡೆಕೋಲು ಶುಭನುಡಿಯನ್ನಾಡಿದರು. ಡಾ.ರಾಜೇಶ್ ಬೆಜ್ಜಂಗಳ, ಅಪೂರ್ವ ಕಲಾವಿದರು ಕಾಸರಗೋಡು ಇದರ ಅಧ್ಯಕ್ಷ ಉಮೇಶ ಎಂ.ಸಾಲಿಯಾನ್, ಪೆÇ್ರ.ಸಿ.ನಾಗಣ್ಣ, ಡಾ|ಯು.ಮಹೇಶ್ವರಿ, ಪೆÇ್ರ.ಎನ್.ಎಸ್.ತಾರಾನಾಥ ಮೊದಲಾದವರು ಉಪಸ್ಥಿತರಿದ್ದರು. ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರೂಪಿಸಿದರು. ಸುಜಾತ ಸಿ.ಎಚ್. ವಂದಿಸಿದರು.