ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಬಾಕಿ ಉಳಿದಿರುವ 10 ಮತ್ತು 12ನೇ ತರಗತಿಯ 29 ಪ್ರಮುಖ ವಿಷಯಗಳಿಗೆ ಪರೀಕ್ಷೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಸಿದ್ದತೆ ಮಾಡಿಕೊಂಡಿದೆ.
ಈಗಾಗಲೇ ನಡೆಸಿರುವ ಪರೀಕ್ಷೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಸಹ ಆರಂಭಿಸುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಿಸಿರುವ ಸಚಿವಾಲಯ, ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಸಿ ಬಿ ಎಸ್ ಇಯನ್ನು ಒದಗಿಸಲು ಮುಂದಾಗಿದೆ. ಲಾಕ್ ಡೌನ್ ನಿಂದಾಗಿ 10 ಮತ್ತು 12ನೇ ತರಗತಿಯ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಲು ನಾವು ಸಿದ್ದತೆ ಮಾಡಿಕೊಂಡಿದ್ದೇವೆ. ಪದವಿ ಕೋರ್ಸ್ ಗಳಿಗೆ ಬಡ್ತಿ ಮತ್ತು ಪ್ರವೇಶಕ್ಕೆ ಸಹಾಯವಾಗಲು 29 ಪ್ರಮುಖ ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆ ಆರಂಭವಾಗುವುದಕ್ಕೆ 10 ದಿನಗಳ ಮೊದಲು ವಿದ್ಯಾರ್ಥಿಗಳಿಗೆ ನೊಟೀಸ್ ಕಳುಹಿಸಲಾಗುವುದು ಎಂದು ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೆÇಖ್ರಿಯಾಲ್ ನಿನ್ನೆ ರಾಜ್ಯಗಳ ಶಿಕ್ಷಣ ಸಚಿವರುಗಳ ಜೊತೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಚಿವಾಲಯದ ಅಧಿಕಾರಿಗಳು ಹೇಳುವ ಪ್ರಕಾರ, ಜೆಇಇ, ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜೂನ್ ತಿಂಗಳಲ್ಲಿ ನಡೆಸುವ ಸಾಧ್ಯತೆಯಿದೆ.