ನವದೆಹಲಿ: 2ನೇ ಹಂತದ ಲಾಕ್'ಡೌನ್ ಮೇ.3ರಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಮೇ.4ರಿಂದ ಹೊಸ ಮಾರ್ಗಸೂಚಿಗಳು ಬಿಡುಗಡೆಯಾಗಲಿವೆ. ಅದರಲ್ಲಿ ಹಲವು ಜಿಲ್ಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಲಾಕ್'ಡೌನ್ ಸಡಿಲಗೊಳಿಸಲಾಗುತ್ತದೆ. ಈ ಕುರಿತು ಶೀಘ್ರದಲ್ಲಿಯೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಹಲವು ಜಿಲ್ಲೆ ಎಂದು ಸ್ಪಷ್ಟವಾಗಿ ಹೇಳಿರುವುದರಿಂದ ಕೊರೋನಾ ವ್ಯಾಪಕವಾಗಿರುವ ಹಾಟ್'ಸ್ಪಾಟ್ ಜಿಲ್ಲೆಗಳಲ್ಲಿ ಮೇ.3ರ ಬಳಿಕವೂ ಲಾಕ್'ಡೌನ್ ಮುಂದುವರೆಯಲಿದೆ ಎಂದು ಸರ್ಕಾರ ಸ್ಪಷ್ಟ ಸುಳಿವು ಬಿಟ್ಟುಕೊಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ದೇಶದಲ್ಲಿನ ಲಾಕ್'ಡೌನ್ ಪರಿಸ್ಥಿತಿ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಲಾಗಿದೆ. ಲಾಕ್'ಡೌನ್'ನಿಂದ ಈ ವರೆಗೆ ಪ್ರಚಂಡ ಲಾಭವಾಗಿದೆ. ಕೊರೋನಾ ಬಿಕ್ಕಟ್ಟಿನ ಪರಿಸ್ಥಿತಿ ಸುಧಾರಣೆಯಾಗಿದೆ. ಹೀಗಾಗಿ ಮೇ.3ರವರೆಗೂ ಕಟ್ಟುನಿಟ್ಟಾಗಿ ಲಾಕ್'ಡೌನ್ ಪಾಲಿಸಬೇಕು. ಈಗ ಆಗಿರುವ ಲಾಭ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ಗೃಹ ಸಚಿವಾಲಯ ಟ್ವೀಟ್ ಮಾಡಿದೆ.