ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು, ಬುಧವಾರದ 24 ಗಂಟೆಗಳ ಅಂತರದಲ್ಲಿ 71 ಮಂದಿ ವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಭಾರತದಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 1008ಕ್ಕೆ ಏರಿಕೆಯಾಗಿದೆ.
ಜೊತೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ಸುಮಾರು 1,813 ಮಂದಿಯಲ್ಲಿ ಸೋಂಕು ದೃಢ ಪಟ್ಟಿದ್ದು, ಆ ಮೂಲಕ ಭಾರತದಲ್ಲಿ ವೈರಸ್ ಸೋಂಕಿತರ ಸಂಖ್ಯೆ 31,787ಕ್ಕೆ ಏರಿಕೆಯಾಗಿದೆ. ಈ ಪೈಕಿ 7,796 ಸೋಂಕಿತರು ಗುಣಮುಖರಾಗಿದ್ದು. ಕೊರೋನಾ ವೈರಸ್ ನಿಂದ ಗುಣಮುಖರಾದವರ ಪ್ರಮಾಣ ಶೇ.24.52ಕ್ಕೆ ಏರಿಕೆಯಾಗಿದೆ. ಅಂತೆಯೇ ವಿವಿಧ ಆಸ್ಪತ್ರೆಗಳಲ್ಲಿ 22,982 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 111 ಮಂದಿ ವಿದೇಶಿಗರು ಕೂಡ ಸೇರಿದ್ದಾರೆ.
ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವು:
ಕಳೆದ 24 ಗಂಟೆಗಳ ಅಂತರದಲ್ಲಿ 71 ಮಂದಿ ವೈರಸ್ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪೈಕಿ 31 ಮಂದಿ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದು, ಗುಜರಾತ್ ನಲ್ಲಿ 19, ಮಧ್ಯ ಪ್ರದೇಶದಲ್ಲಿ 6, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಐದು, ಪಶ್ಚಿಮ ಬಂಗಾಳದಲ್ಲಿ 2, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬ ಸೋಂಕಿತ ಸಾವನ್ನಪ್ಪಿದ್ದಾರೆ.