ನವದೆಹಲಿ: ದೇಶೀಯವಾಗಿ ಆರ್‍ಟಿ-ಪಿಸಿಆರ್ ಮತ್ತು ಆಂಟಿಬಾಡಿ ಟೆಸ್ಟ್ ಕಿಟ್‍ಗಳನ್ನು ಮೇ ತಿಂಗಳೊಳಗೆ ಉತ್ಪಾದಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ಪರೀಕ್ಷಾ ಕಿಟ್ ಗಳ ಉತ್ಪಾದನೆಗೆ ಎಲ್ಲಾ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅನುಮೋದನೆ ಪಡೆದ ನಂತರ ಉತ್ಪಾದನೆ ಆರಂಭವಾಗುತ್ತದೆ. ಮೇ 31 ರೊಳಗೆ ದಿನಕ್ಕೆ 1 ಲಕ್ಷ ಪರೀಕ್ಷೆಗಳ ಗುರಿಯನ್ನು ಮುಟ್ಟಲು ಇದರಿಂದ ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಜೈವಿಕ ತಂತ್ರಜ್ಞಾನ ವಿಭಾಗದಡಿ ಬರುವ ಸ್ವಾಯತ್ತ ಸಂಸ್ಥೆಗಳೊಂದಿಗೆ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಸಚಿವರು, ಕಳೆದ ಏಳು ದಿನಗಳಿಂದ ದೇಶದ 80 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ದೆಹಲಿಯ ಲೆಫ್ಟಿನೆಂಟ್ ಗೌರ್ವನರ್, ದೆಹಲಿ ಆರೋಗ್ಯ ಸಚಿವರು, ಪಾಲಿಕೆ ಆಯುಕ್ತರು ಮತ್ತಿತರರೊಂದಿಗೆ ಹರ್ಷವರ್ಧನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ದೇಶದಲ್ಲಿ ಈವರೆಗೂ 29, 435 ಮಂದಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದ್ದು, 6869 ಮಂದಿ ಚೇತರಿಸಿಕೊಂಡಿದ್ದಾರೆ. 934 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಮಾಹಿತಿ ನೀಡಿದೆ.