ನವದೆಹಲಿ, ಏಪ್ರಿಲ್ 27 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ವಿಮಾನ ಸಂಚಾರ ಸಂಪೂರ್ಣ ರದ್ದಾಗಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ದೇಶಕ್ಕೆ ವಾಪಸ್ ಆಗಲು ಬೇಡಿಕೆ ಸಲ್ಲಿಸುತ್ತಿದ್ದಾರೆ.
ಮೇ 3ರಂದು ಲಾಕ್ ಡೌನ್ ಅಂತ್ಯಗೊಳ್ಳಲಿದೆ. ಪುನಃ ಅದು ವಿಸ್ತರಣೆಯಾಗಲಿದೆಯೇ?, ವಿಮಾನ ಸಂಚಾರ ಆರಂಭವಾಗಲಿದೆಯೇ? ಎಂಬ ಪ್ರಶ್ನೆಗೆ ಇನ್ನೂ ಖಚಿತವಾದ ಉತ್ತರ ಸಿಕ್ಕಿಲ್ಲ. ಆದರೆ, ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿ.
ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರಲು ಶೀಘ್ರವೇ ವಿಶೇಷ ವಿಮಾನಗಳು ಸಂಚಾರ ನಡೆಸಲಿವೆ. ಈ ಕುರಿತು ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾಹಿತಿ ನೀಡಿದ್ದು, ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸರಣಿ ಸಭೆಗಳನ್ನು ನಡೆಸಿದ್ದಾರೆ. ಮೇ 3ರ ಬಳಿಕ ವಿಶೇಷ ವಿಮಾನಗಳು ವಿದೇಶದಿಂದ ಭಾರತೀಯರನ್ನು ವಾಪಸ್ ಕರೆತರಲು ಪ್ರಯಾಣ ಬೆಳೆಸಲಿವೆ.
ಮೇ 3ರ ತನಕ ರೈಲ್ವೆ, ವಿಮಾನ ಪ್ರಯಾಣ ರದ್ದು ಖಚಿತ ಎಂದು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ರಾಜ್ಯಗಳಿಗೆ ಈ ಕುರಿತು ಸೂಚನೆ ನೀಡಿದ್ದಾರೆ. ಅವರು ರಾಜ್ಯಕ್ಕೆ ವಾಪಸ್ ಆದ ಬಳಿಕ ಅಗತ್ಯವಿರುವ ಆಸ್ಪತ್ರೆ, ಕ್ವಾರಂಟೈನ್ ಮಾಡಲು ಸ್ಥಳದ ಅವಕಾಶವನ್ನು ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ವಿದೇಶಾಂಗ ಇಲಾಖೆ ಈ ಕುರಿತಾದ ಕೆಲಸಗಳನ್ನು ಆರಂಭಿಸಿದೆ. ಕೊರೊನಾ ಭೀತಿ ಹಿನ್ನಲೆಯಲ್ಲಿ ದೇಶಕ್ಕೆ ವಾಪಸ್ ಆಗುವವರು ಮಾತ್ರವಲ್ಲ. ಅಲ್ಲಿನ ಕೆಲಸ ಬಿಟ್ಟು ದೇಶಕ್ಕೆ ವಾಪಸ್ ಆಗುವವರನ್ನು ಸಹ ಕರೆತರಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇರಳ ರಾಜ್ಯಕ್ಕೆ ಅತಿ ಹೆಚ್ಚಿನ ಸಂಖ್ಯೆಯ ಜನರು ವಾಪಸ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. 1 ಲಕ್ಷ ಜನರು ರಾಜ್ಯಕ್ಕೆ ವಾಪಸ್ ಆಗಲು ಬಯಸಿದ್ದಾರೆ. ಉಳಿದಂತೆ ದೆಹಲಿ, ಮಹಾರಾಷ್ಟ್ರ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಜನರು ಆಗಮಿಸಬಹುದು. ದುಬೈನಲ್ಲಿ ಇರುವ ಕೇರಳ ಮೂಲದ ಮಹಿಳೆಯೊಬ್ಬರು ಭಾರತಕ್ಕೆ ಬರಲು ಅವಕಾಶ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಗರ್ಭಿಣಿಯಾಗಿರುವ ಮಹಿಳೆ ಇಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.