ಮುಳ್ಳೇರಿಯ: ಕಾರಡ್ಕ ಗ್ರಾಮ ಪಂಚಾಯತಿಗೊಳಪಟ್ಟ ಮುಳ್ಳೇರಿಯ ಸಮೀಪದ ಆಲಂತಡ್ಕದ ಬಾಳೆ, ತೆಂಗು, ಅಡಿಕೆ ಕೃಷಿ ತೋಟಗಳಿಗೆ ಕಾಡಾನೆಗಳ ಹಿಂಡು ನುಗ್ಗಿ ಅಪಾರವಾದ ಕೃಷಿ ನಾಶವನ್ನುಂಟು ಮಾಡಿದೆ.
ಭಾನುವಾರ(ಎ.26 ರಂದು) ಮುಸ್ಸಂಜೆ ಐದು ಕಾಡಾನೆಗಳನ್ನೊಳಗೊಂಡ ಗುಂಪೆÇಂದು ಸಮೀಪದ ವೆಂಕಟ ರಾವ್, ಬಾಲಕೃಷ್ಣ ಕೇಕುಣ್ಣಾಯ, ರಾಧಾಕೃಷ್ಣ ಕೇಕುಣ್ಣಾಯ, ರವಿರಾಜ ಕೇಕುಣ್ಣಾಯ ಮೊದಲಾದವರ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ. ಇದರಿಂದ ಕೃಷಿಗಾಗಿ ಬಳಸುವ ಪೈಪ್ ಲೈನ್‍ಗಳು, ಅಪಾರ ಪ್ರಮಾಣದ ಬಾಳೆ, ತೆಂಗು, ಕಂಗು ಕೃಷಿ ನಾಶವಾಗಿವೆ. ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಕಾಡಾನೆಗಳ ಹಿಂಡನ್ನು ಓಡಿಸಿದರು.
ಎರಡು ತಿಂಗಳುಗಳ ಹಿಂದೆ ಕಾಡಾನೆಗಳ ಹಿಂಡು ಇದೇ ಪರಿಸರಕ್ಕೆ ಬಂದು ಕೃಷಿ ನಾಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಕಾಡಾನೆಗಳು ಪ್ರತ್ಯಕ್ಷಗೊಂಡಿರುವುದು ಸಮೀಪದ ಪ್ರದೇಶ ವಾಸಿಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.
ಕಳೆದ ಎರಡು ತಿಂಗಳಿನಿಂದ ಇದೇ ಪರಿಸರದಲ್ಲಿ ದಿನನಿತ್ಯ ಕಾಡುಕೋಣಗಳ ಉಪಟಳ ನಡೆಯುತ್ತಿರುವುದರ ಬಗ್ಗೆ ವರದಿಯಾಗಿತ್ತು. ಅದರ ಆತಂಕ ಮುಗಿಯುವುದರ ಮೊದಲೇ ಆನೆಗಳ ಹಿಂಡು ಆಗಮಿಸಿರುವುದು ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೊನಾ ಸಮಯದ ಸಂದಿಗ್ಧಾವಸ್ಥೆಯಲ್ಲಿ ಎದುರಾಗುತ್ತಿರುವ ಇಂತಹ ನಾಶ ಕೃಷಿಕರನ್ನು ಹೈರಾಣಾಗಿಸಿದೆ. ಸಮಸ್ಯೆಯ ಗಂಭೀರತೆಯನ್ನು ಅರಿತು ಅರಣ್ಯ ಇಲಾಖೆ ಮತ್ತು ಸರ್ಕಾರ ಸೂಕ್ತ ಪರಿಹಾರವನ್ನು ಕಂಡು ನಾಶನಷ್ಟಕ್ಕೆ ಸರ್ಕಾರದ ಸಹಾಯವನ್ನೊದಗಿಸಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.