ಮಂಜೇಶ್ವರ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹ್ಯಾಟ್ ಸ್ಪಾಟ್ ಪ್ರದೇಶವೆಂದೇ ಘೋಷಿಸಿದ ಮಂಜೇಶ್ವರ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ದಿಢೀರನೆ ವಿದ್ಯುತ್ ಇಲಾಖಾ ಸಿಬ್ಬಂದಿಗಳು ಮನೆ ಮನೆ ತೆರಳಿ ವಿದ್ಯುತ್ ಬಿಲ್ ನೀಡುತ್ತಿರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ.
ಮಂಜೇಶ್ವರ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ಸುಮಾರು ಇಪ್ಪತ್ತೈದು ಸಾವಿರ ಗ್ರಾಹಕರಿದ್ದಾರೆ. ಇವರಿಗೆ ಬಿಲ್ ಗಳನ್ನು ನೀಡಲು ನಾಲ್ಕು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಕೊರೊನಾ ತಡೆಗಟ್ಟಲು ಸರ್ಕಾರ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತಿದ್ದರೂ ಕೇರಳ ವಿದ್ಯುತ್ ಇಲಾಖೆ ಮಾತ್ರ ಇದನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಹಲವು ಶಂಕೆಗಳಿಗೆ ಕಾರಣವಾಗಿದೆ. ಗ್ರಾಹಕರ ಮನೆಗೆ ತೆರಳುತ್ತಿರುವ ಸಿಬ್ಬಂದಿಗಳಿಂದ ಅಥವಾ ಗ್ರಾಹಕರ ಮನೆಯೊಂದರಿಂದ ವಿದ್ಯುತ್ ಸಿಬ್ಬಂದಿಗಳಿಗೆ ಯಾಕೆ ರೋಗ ಹರಡಬಾರದು ಎಂದು ಗ್ರಾಹಕರ ಪ್ರಶ್ನಿಸುತ್ತಾರೆ.
ಮತ್ತೊಂದೆಡೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೀಟರ್ ರೀಡಿಂಗ್ ತೆಗೆಯಲು ತಡವಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ಲಿನಲ್ಲಿ ಭಾರಿ ಹೆಚ್ಚಳವುಂಟಾಗಿದೆ. ಏಪ್ರಿಲ್ 20 ರ ತನಕ ಮೀಟರ್ ರೀಡಿಂಗ್ ನಡೆಸಿರಲಿಲ್ಲ. ಈ ಬಗ್ಗೆ ಯಾವುದೇ ಸೂಕ್ತ ತೀರ್ಮಾನವನ್ನು ತೆಗೆಯದೆ ಬೇಕಾಬಿಟ್ಟಿ ಬಿಲ್ ಗಳನ್ನೂ ನೀಡಿರುವುದು ಕೂಡಾ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಾಧಾರಣವಾಗಿ 60 ದಿನಗಳಿಗೊಮ್ಮೆ ಬಿಲ್ ಲಭಿಸುತ್ತಿರುವ ಗ್ರಾಹಕರಿಗೆ ಈ ಸಲ ಹತ್ತು ದಿನ ತಡವಾಗಿ ಲಭಿಸಿರುವುದರಿಂದ ಮೀಟರಿನಲ್ಲಿ ಆಗಿರುವ ಏರುಪೇರಿನಿಂದಾಗಿ ಬಿಲ್ ಮೊತ್ತ ಹೆಚ್ಚಳವಾಗಿದೆ. 60 ದಿನಗಳಿಗಿಂತ ಮೇಲೆ ಬಂದ ಹಿನ್ನೆಲೆಯಲ್ಲಿ ಸ್ಲಾಬುಗಳನ್ನು ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ತಾರೀಫಿನಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿರುವ ಕಾರಣ ಬಿಲ್ ಮೊತ್ತ ಅಧಿಕವಾಗಿದೆ. ಇದು ದಿನದಿಂದ ದಿನಕ್ಕೆ ವಿವಾದವಾದ ಹಿನ್ನೆಲೆಯಲ್ಲಿ ಎಚ್ಛೆತ್ತುಕೊಂಡ ಕೇರಳ ವಿದ್ಯುತ್ ಸಚಿವ ಎಡವಟ್ಟಾಗಿರುವುದು ಗಮನಕ್ಕೆ ಬಂದಿದೆ, ಗ್ರಾಹಕರ ಹಿತದೃಷ್ಟಿಯಲ್ಲಿ ಮುಂದಿನ ಬಿಲ್ ಗಳಲ್ಲಿ ಹೆಚ್ಚಳ ಬಂದ ಗ್ರಾಹಕರಿಗೆ ವಿನಾಯಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ.