ಮಂಜೇಶ್ವರ/ಬದಿಯಡ್ಕ : ಗಡಿ ಪ್ರದೇಶದ ಕೆಲವೊಂದು ತರಕಾರಿ ಹಾಗೂ ದಿನಸಿ ಅಂಗಡಿಗಳಲ್ಲಿ ಕೊರೊನ ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಸಾಮಾಗ್ರಿಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಾರೆಂಬ ದೂರಿನಂತೆ ಮಂಜೇಶ್ವರ ಹಾಗೂ ಬದಿಯಡ್ಕದ ಅಂಗಡಿಗಳಿಗೆ ವಿಜಿಲೆನ್ಸ್ ಅಧಿಕಾರಿಗಳು ಮಾರುವೇಷದಲ್ಲಿ ದಾಳಿ ನಡೆಸಿ ದರಗಳ ಬಗ್ಗೆ ತನಿಖೆ ನಡೆಸಿದ್ದಾರೆ.
ತಲಪಾಡಿಯಿಂದ ಹೊಸಂಗಡಿ ಹಾಗೂ ಬದಿಯಡ್ಕ ಪ್ರದೇಶಗಳನ್ನು ಕೇಂದ್ರೀಕರಿಸಿ ದಾಳಿ ನಡೆದಿದೆ. ಪ್ರದೇಶಗಳ ಪರಿಸ್ಥಿತಿಯನ್ನು ಹಾಗೂ ಸಾಮಾಗ್ರಿಗಳ ಲಭ್ಯತೆಯನ್ನು ಸೂಕ್ಷ್ಮವಾಗಿ ಪರಿಶೋಧಿಸಿ ತನಿಖೆ ನಡೆಸಲಾಗಿದೆ.
ಮೊದಲ ಅಂಗಡಿಗೆ ದಾಳಿ ನಡೆದಾಗಲೇ ಉಳಿದವರಿಗೆ ಮಾಹಿತಿ ಸೋರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಉಳಿದ ಅಂಗಡಿಗಳಲ್ಲಿ ಒಳಗಿಟ್ಟಿದ್ದ ದರಪಟ್ಟಿಗಳು ಹೊರಗಡೆ ಪ್ರತ್ಯಕ್ಷಗೊಂಡಿರುವುದು ಬಯಲಾಗಿದೆ. ಬಳಿಕ ಅಧಿಕಾರಿಗಳು ದರಪಟ್ಟಿಗಳನ್ನು ಹೊರಗಡೆ ಕಡ್ಡಾಯವಾಗಿ ಸ್ಥಾಪಿಸಬೇಕು. ಇಲ್ಲವಾದರೆ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ. ದಾಳಿಯ ತನಿಖಾ ವಿವರಗಳನ್ನು ನಾಗರಿಕ ಪೂರೈಕಾ ಇಲಾಖೆಯ(ಸಿವಿಲ್ ಸಪ್ಲೈ) ಅಧಿಕಾರಿಗಳಿಗೆ ನೀಡುವುದಾಗಿ ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಜಿಲೆನ್ಸ್ ಅಧಿಕಾರಿಗಳಾದ ಮಧುಸೂಧನ್ ಹಾಗೂ ಸುಭಾಷ್ ತಂಡದಲ್ಲಿದ್ದರು. ಒಳ ರಸ್ತೆಗಳಲ್ಲಿರುವ ಕೆಲವೊಂದು ಅಂಗಡಿಗಳಲ್ಲಿ ಗರಿಷ್ಠ ಮಾರಾಟ ದರಕ್ಕಿಂತ 3 ರಿಂದ 30 ರೂ. ತನಕ ದರ ಹೆಚ್ಚಿಸುವ ವ್ಯಾಪಾರಿಗಳ ವಿರುದ್ದ ದೂರು ಲಭಿಸಿರುವ ಹಿನ್ನೆಲೆಯಲ್ಲಿ ಅಂತಹ ಪ್ರದೇಶಗಳಿಗೂ ದಾಳಿ ನಡೆಸಿ ಸುಲಿಗೆ ಮಾಡುತ್ತಿರುವ ವ್ಯಾಪಾರಿಗಳ ಪರವಾನಿಗೆಯನ್ನು ರದ್ದುಗೊಳಿಸಿ ದಂಡ ವಿಧಿಸುವಂತೆ ಶಿಫಾರಸು ಮಾಡಲಾಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೀನು ಮಾರಾಟ ಕೇಂದ್ರಗಳಲ್ಲೂ ಜನ ಸಾಮಾನ್ಯರ ಕತ್ತುಕೊಯ್ಯುವ ದರ ವಿಧಿಸುತ್ತಿರುವ ದೂರುಗಳು ಲಭಿಸಿದೆ. ಅಂತವರ ವಿರುದ್ದವೂ ಕ್ರಮ ಜರಗಲಿರುವುದಾಗಿ ಅಧಿಕಾರಿಗಳು ತಿಳಿಸಿರುವರು.