ನವದೆಹಲಿ: ದೋಷ ಪೂರಿತ ಕೋವಿಡ್-19 ರ್ಯಾಪಿಡ್ ಟೆಸ್ಟ್ ಕಿಟ್ ಗಳಿಂದ ಸರ್ಕಾರಕ್ಕೆ ಒಂದು ಒಂದು ರೂಪಾಯಿ ಕೂಡ ನಷ್ಟ ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಆ ಮೂಲಕ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಬೆಂಬಲಕ್ಕೆ ನಿಂತಿದೆ.
ಚೀನಾದ ಎರಡು ಕಂಪನಿಗಳಿಂದ ದುಪ್ಪಟ್ಟು ಹಣ ನೀಡಿ ಕೇಂದ್ರ ಸರ್ಕಾರ ರಾಪಿಡ್ ಟೆಸ್ಟ್ ಕಿಟ್‍ಗಳನ್ನು ಖರೀದಿಸಿತ್ತು ಎಂದು ಆರೋಪಿಸಲಾಗಿತ್ತು. ಇದು ತೀವ್ರ ವಿವಾದ ಹುಟ್ಟಿಹಾಕಿತ್ತು. ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ICMR), ಕಿಟ್‍ಗಳ ಖರೀದಿಗೆ ಇದುವರೆಗೆ ಚೀನಾದ ಕಂಪೆನಿಗಳಿಗೆ ಒಂದೇ ಒಂದು ರುಪಾಯಿ ಪಾವತಿಸಿಲ್ಲ ಎಂದು ಹೇಳಿದೆ. ಅಂತೆಯೇ ಕಿಟ್‍ಗಳ ಖರೀದಿಗೆ ಯಾವುದೇ ಮುಂಗಡ ಹಣ ನೀಡಿಲ್ಲ. ಖರೀದಿ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ICMR ತಿಳಿಸಿದೆ. ಈ ಮೂಲಕ ICMR ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದೆ.
ಇಡೀ ಜಗತ್ತನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ಭಾರತ ದೇಶವೂ ಕೊವಿಡ್ ಎಂಬ ಮಹಾಮಾರಿಗೆ ಸಿಲುಕಿಕೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ. ಕೊರೊನಾ ವಿರುದ್ಧ ಇಡೀ ದೇಶ ಹೋರಾಡುತ್ತಿದೆ. ಆದರೆ, ಕೊರೊನಾ ಪರೀಕ್ಷೆ ಕಿಟ್‍ಗಳ ಖರೀದಿಯಲ್ಲಿ ಐಸಿಎಂಆರ್ ಅಕ್ರಮ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 4500 ರೂಪಾಯಿಗೆ ಬೆಲೆ ನೀಡಿ ಟೆಸ್ಟಿಂಗ್ ಕಿಟ್ ಖರೀದಿ ಮಾಡುತ್ತಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಆದರೆ, ಈ ಸುದ್ದಿ ಸುಳ್ಳು ಎಂದು ಐಸಿಎಂಆರ್ ಸ್ಪಷ್ಟನೆ ನೀಡಿದೆ. ''ಐಸಿಎಂಆರ್ ಅನುಮೋದಿಸಿದ ಬೆಲೆ ಶ್ರೇಣಿ RT-PCRಗೆ 740-1150 ಮತ್ತು ತ್ವರಿತ ಪರೀಕ್ಷೆಗೆ 528-795 ರೂ. ಯಾವುದೇ ಪರೀಕ್ಷೆಗೆ 4,500 ರೂ ಸಂಗ್ರಹಿಸುತ್ತಿಲ್ಲ. ಯಾವುದೇ ಭಾರತೀಯ ಕಂಪನಿಯು ಕಡಿಮೆ ದರದಲ್ಲಿ ಸರಬರಾಜು ಮಾಡಲು ಬಯಸಿದರೆ ಕೂಡಲೇ ಐಸಿಎಂಆರ್ ಅಥವಾ ಎಂಎಸ್ ಅನು ನಗರ, ಜೆಎಸ್ ಆರೋಗ್ಯ ಸಂಶೋಧನೆ (011-23736222) ಅವರನ್ನು ಸಂಪರ್ಕಿಸಬಹುದು' ಎಂದು ಐಸಿಎಂಆರ್ ಟ್ವೀಟ್ ಮಾಡಿದೆ.