ದೆಹಲಿ: ಕಳೆದ ಡಿಸೆಂಬರ್ ತಿಂಗಳಲ್ಲಿ ಕೊರೊನಾ ವೈರಸ್ ಚೀನಾದಲ್ಲಿ ಹುಟ್ಟಿಕೊಂಡಿತ್ತು. ಐದು ತಿಂಗಳು ಮುಗಿಯುತ್ತಾ ಬಂದಿದೆ. ಈ ವೈರಸ್‍ನಿಂದ 2 ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. 31 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ.
ಈವರೆಗೂ ಕೊರೊನಾಗೆ ಸೂಕ್ತ ಔಷಧ ಕಂಡುಹಿಡಿದಿಲ್ಲ. ಪರಿಹಾರಕ್ಕಾಗಿ ಎಲ್ಲ ದೇಶಗಳು ಪ್ರಯೋಗ, ಸಂಶೋಧನೆಗಳನ್ನು ಮಾಡುತ್ತಿದ್ದರೂ ಲಸಿಕೆ ಸಿಗುತ್ತಿಲ್ಲ. ಆದರೆ, ಒಂದೊಂದೆ ಆತಂಕಕಾರಿ ವಿಷಯಗಳು ಮಾತ್ರ ಬಹಿರಂಗವಾಗುತ್ತಿದೆ.
ಇದೀಗ, ಕೊರೊನಾ ಕುರಿತು ಚೈನೀಸ್ ವಿಜ್ಞಾನಿಗಳು ಆಘಾತಕಾರಿ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಕೊವಿಡ್ ಶಾಶ್ವತವಾಗಿ ಮಾಯವಾಗುವುದು ಅನುಮಾನ, ಇದು ಪ್ರತಿವರ್ಷವೂ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ.
ಕೊರೊನಾ ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ:
ಕೊರೊನಾ ವೈರಸ್ ಕಾಯಿಲೆಯನ್ನು ಸಂಪೂರ್ಣವಾಗಿ ತಡೆಯಲು ಮತ್ತು ಅದರಿಂದ ಗುಣವಾಗಲು ಸಾಧ್ಯವಿಲ್ಲ ಎಂದು ಚೈನಿಸ್ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಜ್ವರ ಅಥವಾ ಇನ್ನಿತರ ರೋಗಗಳಿಗೆ ಕೊವಿಡ್ ಕಾರಣವಾಗುತ್ತೆ ಎಂದು ತಜ್ಞರು ಹೇಳಿದ್ದಾರೆ ಎಂದು ಬ್ಲೂಮ್ಬರ್ಗ್ ನ್ಯೂಸ್ ವರದಿ ಮಾಡಿದೆ.
ದೀರ್ಘಕಾಲ ಉಳಿಯುವ ಸೋಂಕು:
ಚೀನಾದ ಅತ್ಯುನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಯಾದ 'ಚೀನೀ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್'ನ ರೋಗಕಾರಕ ಜೀವಶಾಸ್ತ್ರ ಸಂಸ್ಥೆಯ ನಿರ್ದೇಶಕ ಜಿನ್ ಕಿ ಹೇಳಿರುವ ಪ್ರಕಾರ ''ಕೊರೊನಾ ಸೋಂಕು ದೀರ್ಘ ಸಮಯ ಮನುಷ್ಯನ ದೇಹದಲ್ಲಿ ಉಳಿಯುವ ಸಾಧ್ಯತೆ ಇದೆ. ಮಾನವ ದೇಹದಲ್ಲಿ ನಿರಂತರವಾಗಿ ನೆಲೆಸಲಿದೆ.' ಎಂದು ತಿಳಿಸಿದ್ದಾರೆ ಎಂಬ ಸುದ್ದಿಯನ್ನು ಬ್ಲೂಮ್‍ಬರ್ಗ್ ನ್ಯೂಸ್ ವರದಿ ಮಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ:
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯೂ ಹಿಂದೆಯೊಮ್ಮೆ ಎಚ್ಚರಿಕೆ ನೀಡಿತ್ತು. ಕೊರೊನಾ ವೈರಸ್ ಎನ್ನುವುದು ದೀರ್ಘಕಾಲ ಮನುಷ್ಯನ ಜೊತೆ ಇರಬಹುದು. ಇದಕ್ಕೆ ಸಂಪೂರ್ಣ ಲಸಿಕೆ ಸದ್ಯಕ್ಕಿಲ್ಲ ಎಂದು ಹೇಳಿತ್ತು. ಯುಎಸ್ ವಿಜ್ಞಾನಿಗಳು ಕೂಡ ಇದೇ ವಿಚಾರವನ್ನು ಉಲ್ಲೇಖಿಸಿದ್ದರು. ಕೊರೊನಾ ವೈರಸ್ ಮತ್ತೆ ಮತ್ತೆ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಎರಡನೇ ಸಲಕ್ಕೆ ಸಜ್ಜಾಗಬೇಕಿದೆ:
'ಈ ವಿಚಾರದಲ್ಲಿ ನಾವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಇದರ ಪ್ರಬಾವ ಗಮನಿಸುತ್ತಿದ್ದರೆ, ಎರಡನೇ ಸಲ ಕೊರೊನಾ ಎದುರಿಸಲು ನಾವು ಸಿದ್ಧವಾಗಬೇಕಿದೆ' ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಈವರೆಗೂ ಯುಎಸ್ ಮತ್ತು ಚೀನಾದಲ್ಲಿ ಮನುಷ್ಯನ ಮೇಲೆ ಕೊರೊನಾ ಲಸಿಕೆ ಪ್ರಯೋಗ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಅದು ಕಾರ್ಯರೂಪಕ್ಕೆ ಬರುವುದಕ್ಕೆ ಒಂದೂವರೆ ವರ್ಷ ಆಗಬಹುದು ಎಂಬ ಮಾತಿದೆ.